“ಕೃಷ್ಣನಿಗೆ ಏಕೆ ಅವಲಕ್ಕಿ ಇಷ್ಟ?” -ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ತನ್ನಿಮಿತ್ತ ಈ ವಿಶೇಷ ಕಿರು ಲೇಖನ, ಸುಧಾಮ ಕೃಷ್ಣನಿಗೆ ಅವಲಕ್ಕಿ ಕೊಟ್ಟ, ಕೃಷ್ಣ ಅದನ್ನು ಇಷ್ಟಪಟ್ಟ ಏಕೆಂದು ಕೃಷ್ಣನೇ ಹೇಳಿರುವ ಸಾರಾಂಶ ಇಲ್ಲಿದೆ-ಎಚ್.ಬಿ.ಮಂಜುನಾಥ, ಹಿರಿಯಪತ್ರಕರ್ತ. ಶ್ರೀಕೃಷ್ಣನ ಸಹಪಾಠಿಯಾದ ಸುದಾಮನು ಅಂದರೆ ಕುಚೇಲನು ಕೃಷ್ಣನನ್ನು ಭೇಟಿಯಾಗಲು ಹೋಗುವಾಗ ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಹೋಗಿ ಅತ್ಯಂತ ಸಂಕೋಚದಿಂದ ಕೃಷ್ಣನಿಗೆ ಕೊಟ್ಟಾಗ ಕೃಷ್ಣ ಅದನ್ನು ಇಷ್ಟಪಟ್ಟು ಪ್ರೀತಿಯಿಂದ ತಿಂದ ಎಂದು ಹೇಳಲಾಗುತ್ತದೆ, ಅಂದರೆ ಕೃಷ್ಣನಿಗೆ ವಸ್ತು ರೂಪದ ಅವಲಕ್ಕಿ ಅಷ್ಟೊಂದು ಇಷ್ಟವೇ? ಈ ಬಗ್ಗೆ ಭಗವಾನ್ ಶ್ರೀಕೃಷ್ಣನೇ ಭಾಗವತದ 22 ನೇ ಅಧ್ಯಾಯದ ದಶಮಸ್ಕಂದದಲ್ಲಿ ಅಭಿಪ್ರಾಯಪಟ್ಟಿರುವನೆಂದು ಪ್ರಾಜ್ಞರು ಹೇಳುವ ಅಂಶವನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲಿಚ್ಛಿಸುವೆ.
ಹಾಗಾದರೆ ವಸ್ತು ರೂಪದ ಅವಲಕ್ಕಿ ತಯಾರಾಗುವ ವಿಧಾನವನ್ನು ಮೊದಲು ಅವಲೋಕಿಸೋಣ, ಭತ್ತವನ್ನು ನೀರಿನಲ್ಲಿ ಮುಳುಗಿಸಿ ತೋಯಿಸಬೇಕು, ಹಾಗೆ ತೊಯ್ದ ಭತ್ತವನ್ನು ಓಡಿನಲ್ಲಿ ಅರ್ಥಾತ್ ಬಾಣಲೆಯಲ್ಲಿ ಹುರಿಯಬೇಕು, ನಂತರ ಅದನ್ನು ಒನಕೆಯಿಂದ ಕುಟ್ಟಿ ಕುಟ್ಟಿ ಸಿಪ್ಪೆತೆಗೆದು ವಿಸ್ತಾರ ವಾಗುವಂತೆ ಮಾಡಬೇಕು. ಇದರ ಅರ್ಥ “ನಾವು ಭಕ್ತಿಯಲ್ಲಿ ಮುಳುಗಿ ತೋಯಬೇಕು, ನಂತರ ಕರ್ಮವೆಂಬ ಓಡಿನಲ್ಲಿ ಹುರಿ ಯಲ್ಪಟ್ಟು ಅಂದರೆ ಬೆಂದು, ನಂತರ ಜ್ಞಾನವೆಂಬ ಒನಕೆಯ ಪೆಟ್ಟಿಗೆ ಅಹಂಕಾರವೆಂಬ ಸಿಪ್ಪೆಯನ್ನು ಕಳಚಿಕೊಂಡು ಹೃದಯ ವಿಸ್ತಾರವಾಗ ಬೇಕು ಇದು ವೈರಾಗ್ಯ, ಇದೇ ಪರಿಪಾಕ ಗೊಳ್ಳುವಿಕೆ. ಭತ್ತವನ್ನು ಹಾಗೇ ತಿನ್ನಲು ಹೋದರೆ ಬಾಯಿಯೊಳಗೆ ಗಾಯವಾಗಿ ನೋವಾಗುತ್ತದೆ, ಅಕ್ಕಿ ಮಾಡಿಕೊಂಡು ತಿಂದರೆ ಹೊಟ್ಟೆ ನೋಯುತ್ತದೆ, ಅವಲಕ್ಕಿ ಮಾಡಿಕೊಂಡು ತಿಂದರೆ ಬಾಯಿಗೂ ಹಿತ ಹೊಟ್ಟೆಗೂ ಹಿತ ಹೀಗೆ ಪರಿಪಾಕ ಗೊಂಡ ಅವಲಕ್ಕಿ ಮತ್ತೆ ಮೊಳಕೆಯೊಡೆಯುವುದಿಲ್ಲ,ಭತ್ತವೆಂದರೆ ಮೊಳಕೆಯೊಡೆಯುತ್ತದೆ, ಅಂದರೆ ಭಕ್ತಿ ಜ್ಞಾನ ವೈರಾಗ್ಯ ಗಳಿಂದ ಪರಿ ಪಾಕಗೊಂಡ ವರಿಗೆ ಪುನರ್ಜನ್ಮವಿಲ್ಲ ಎಂದರ್ಥ.
ಇದೇ ಕೃಷ್ಣ ಪ್ರೀತಿ, ಈ ಅರ್ಥದಲ್ಲಿ ಶ್ರೀಕೃಷ್ಣನಿಗೆ ಅವಲಕ್ಕಿ ತತ್ವ ಪ್ರೀತಿಯೇ ವಿನಹ ವಸ್ತು ರೂಪದ ಅವಲಕ್ಕಿ ಅಲ್ಲ. ನಾವು ಅವಲಕ್ಕಿಯನ್ನು ಕೃಷ್ಣನಿಗೆ ನೈವೇದ್ಯ ಮಾಡಿದಾಕ್ಷಣ, ನೈವೇದ್ಯ ಮಾಡಿದ ಅವಲಕ್ಕಿಯನ್ನು ನಾವು ಸೇವಿಸಿದಾಕ್ಷಣ ಕೃಷ್ಣ ಪ್ರೀತಿಯನ್ನು ಪಡೆದೆವೆಂದರೆ, ಪಡೆಯುತ್ತೇವೆ ಎಂದರೆ ಅದು ಬರೀ ಭ್ರಮೆ ಅಷ್ಟೇ. ಅವಲಕ್ಕಿ ಯಂತೆ ನಾವು ಭಕ್ತಿ ಜ್ಞಾನ ವೈರಾಗ್ಯ ಗಳಿಂದ ಪರಿಪಾಕಗೊಂಡಿವರೆ ಮೊಳಕೆ ಯೊಡೆಯದೆ ಭಯ ಶೋಕ ಮೋಹ ಗಳಿಂದ ಕೂಡಿದ ಜನ್ಮಜನ್ಮಾಂತರ ಗಳಿಂದ ಪುನರ್ಜನ್ಮ ವಿರದ ಮೋಕ್ಷ ಪಡೆಯುತ್ತೇವೆ ಎಂದರ್ಥ. ಇದೇ ಶ್ರೀ ಕೃಷ್ಣನ ಅವಲಕ್ಕಿ ಪ್ರೀತಿಯ ತತ್ವಾರ್ಥ. ಈ ತತ್ವಾರ್ಥವಿರುವುದರಿಂದಲೇ ಅವಲಕ್ಕಿಯು ಶ್ರೀ ಗಣಪತಿಗೂ ಪ್ರೀತಿ, ಗಣಹೋಮದ ಅಷ್ಟದ್ರವ್ಯಕ್ಕೂ ಅವಲಕ್ಕಿ ಬೇಕು. ಎಚ್.ಬಿ.ಮಂಜುನಾಥ- ಹಿರಿಯ ಪತ್ರಕರ್ತ