ರಾಜ್ಯ ಸರಕಾರದ ಮಧಾಹ್ನದ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಹಾಗೂ ಸಹಾಯಕ ಅಡುಗೆ ತಯಾರಕರು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆ-1948ರಡಿ ಸೂಕ್ತ ವೇತನ ನಿಗದಿಪಡಿಸಲು ಕೋರಿ 2018ರಲ್ಲಿ ಸಾಮಾಜಿಕ ಕಾರ್ಯಕರ್ತೆ ಡಾ| ನೌಹೇರಾ ಶೇಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿದ ಹಂಗಾಮಿ ಮುಖ್ಯ ನ್ಯಾ| ಆಲೋಕ್ ಆರಾಧೆ ಹಾಗೂ ನ್ಯಾ| ಎಸ್.
ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಕನಿಷ್ಠ ವೇತನ ಪಡೆದುಕೊಳ್ಳಲು ಅವರು ಅರ್ಹರಲ್ಲ ಎಂದು ಅಭಿಪ್ರಾಯಪಟ್ಟಿದೆ.
ಕನಿಷ್ಠ ವೇತನ ಕಾಯ್ದೆಯಲ್ಲಿ ಉಲ್ಲೇಖೀಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯ್ದೆಯ ನಿಯಮಗಳು ಅನ್ವಯಿಸುತ್ತವೆ. ಬಿಸಿಯೂಟ ಯೋಜನೆಯಡಿ ದಿನಕ್ಕೆ ನಾಲ್ಕು ಗಂಟೆಯ ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.