ಅಡಿಕೆ ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು ಎಂದು ವಿನಂತಿಸಿ, ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳ ಪ್ರಮುಖರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ವಿನಂತಿಸಿದರು.
ಆಮದು ಆಗುವ ಅಡಿಕೆ ಉತ್ಪನ್ನದ ಮೇಲೆ ನಿಯಂತ್ರಣ ಹೇರಿ ರಾಜ್ಯದ ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡಬೇಕು ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ಅಡಿಕೆ ಬೆಳೆಗಾರರ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನಿಯೋಗವು ಮನವಿ ಸಲ್ಲಿಸಿತು.
ಅಡಿಕೆ ಬೆಳೆಯ ನಿಗದಿತ ಉತ್ಪಾದನಾ ವೆಚ್ಚ ಹೆಚ್ಚು ಮಾಡಬೇಕು, ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು. ಅಡಿಕೆ ಮೇಲಿನ ಜಿಎಸ್‌ಟಿ ದರದ ಬಗ್ಗೆಯೂ ಕೇಂದ್ರ ಸಚಿವರ ಬಳಿ ಚರ್ಚಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಸುದ್ದಿಗಾರರಿಗೆ ತಿಳಿಸಿದರು.ಕೇಂದ್ರ ಸರ್ಕಾರವು 2017ರಲ್ಲಿ ಕನಿಷ್ಠ ಆಮದು ಬೆಲೆಯನ್ನು ಕೆ.ಜಿ.ಗೆ ₹ 251ಕ್ಕೆ ನಿಗದಿ ಪಡಿಸಿತ್ತು.
ಇದನ್ನು ಕೆ.ಜಿ.ಗೆ ₹ 360ಕ್ಕೆ ಹೆಚ್ಚಿಸುವಂತೆ, ಆಮದು ಅಡಿಕೆ ನಿಯಂತ್ರಿಸುವಂತೆ ಹಾಗೂ ಉತ್ತರ ಪ್ರದೇಶದ ಸರ್ಕಾರ ವಿಧಿಸಿರುವ ಮಂಡಿ ತೆರಿಗೆಗೆ ವಿನಾಯಿತಿ ನೀಡುವಂತೆ ನಿಯೋಗ ಒತ್ತಾಯಿಸಿತು.
ಮಂಜಪ್ಪ ಹೊಸಬಾಳೆ ಹಾಗೂ ರಮೇಶ ವೈದ್ಯರ ನೇತೃತ್ವದ ನಿಯೋಗದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ, ರಾಜ್ಯ ಸಹಕಾರ ಭಾರತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ, ಶಿರಸಿ ಟಿಎಸ್‌ಎಸ್ ನಿರ್ದೇಶಕ ಶಶಾಂಕ್ ಎಸ್. ಹೆಗಡೆ, ಮಹಾಮಂಡಳದ ನಿರ್ದೇಶಕ ಶಿವಕುಮಾರ್ ಇದ್ದರು.