ಶಿವಮೊಗ್ಗದಲ್ಲಿ ಫ್ಲೆಕ್ಸ್ ತೆರವಿನ ವಿವಾದ ಬಳಿಕ ಯುವಕನಿಗೆ ಚಾಕು ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿಸಲಾಗಿದೆ.
ಶಿವಮೊಗ್ಗದಲ್ಲಿ ಪ್ರಕ್ಷ್ಯುಬದ್ಧ ಸ್ಥಿತಿ ನಿರ್ಮಾಣವಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಎಡಿಜಿಪಿ ಅಲೋಕ್ ಕುಮಾರ್ ಮೊಕ್ಕಾಂ ಹೂಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಆರ್ಎಎಫ್(ರ್ಯಾಪಿಡ್ ಆಕ್ಷನ್ ಫೋರ್ಸ್) ತುಕಡಿಯಿಂದ ರೂಟ್ ಮಾರ್ಚ್ ನಡೆಯುತ್ತಿದೆ. ಬೆಂಗಳೂರಿನಿಂದ ಆಗಮಿಸಿರುವ ಆರ್ಎಎಫ್ ತುಕಡಿ ಜತೆಗೆ ಕೆಎಸ್ಆರ್ಪಿ ಹಾಗೂ ಡಿಎಆರ್ ನಿಂದಲೂ ಪಥ ಸಂಚಲನ ನಡೆಯುತ್ತಿದೆ.
ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಕೆ.ಆರ್. ಪುರಂ ರಸ್ತೆ ಸೇರಿದಂತೆ ಹಳೇ ಶಿವಮೊಗ್ಗ ಭಾಗದಲ್ಲಿ ರೂಟ್ ಮಾರ್ಚ್ ನಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್,ಶಿವಮೊಗ್ಗದಲ್ಲಿ ಬೇರೆ ಬೇರೆ ಜಿಲ್ಲೆಯ ಪೊಲೀಸರು ಬೀಡು ಬಿಟ್ಟಿದ್ದಾರೆ. ಜನರು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆಯಿಲ್ಲ ಎಂದು ಅಭಯ ನೀಡಿದರು.
ಸಾರ್ವಜನಿಕರಲ್ಲಿರುವ ಭಯ ತೊಡೆದುಹಾಕುವ ನಿಟ್ಟಿನಲ್ಲಿ ಆರ್ಎಎಫ್ ನಿಂದ ರೂಟ್ ಮಾರ್ಚ್ ಮಾಡಲಾಗುತ್ತಿದೆ. ತಪ್ಪಿತಸ್ಥರು ಮತ್ತು ಪುಡಾರಿಗಳಿಗೆ ಭಯ ಹುಟ್ಟಿಸಲು ಇದೂ ಒಂದು ತಂತ್ರ. ಜನರು ಅಂಜಬೇಕಾದ ಅವಶ್ಯಕತೆಯಿಲ್ಲ. ಜನರ ಜತೆ ನಾವಿದ್ದೇವೆ. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಯಲಿದೆ.
ನೀವೆಲ್ಲರೂ ಸೇಫ್ ಇದ್ದೀರಿ ಎಂದು ತಿಳಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.
