40 ವರ್ಷಗಳ ಹಿಂದೆ ನಾನು ವಿದೇಶಾಂಗ ಸೇವೆಗೆ ಸೇರಿಕೊಂಡಾಗ ಜಾಗತಿಕ ಮಟ್ಟದಲ್ಲಿ ಭಾರತದ ದನಿಯೇ ಇರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ದಕ್ಷ ನಾಯಕತ್ವದಿಂದ ನಮ್ಮ ದನಿಗೆ ಅಭೂತಪೂರ್ವ ಬೆಲೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು. ಹಾರೋಹಳ್ಳಿ ಸಮೀಪದ ಜೈನ್ ವಿವಿ ಆವರಣದಲ್ಲಿ ಶನಿವಾರ ನಡೆದ ಹರ್ ಘರ್ ತಿರಂಗಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಂಟು ವರ್ಷಗಳಿಂದ ಈಚೆಗೆ ನಮ್ಮ ಯೋಗ, ಆಹಾರ, ಅಧ್ಯಾತ್ಮ, ಸಂಸ್ಕೃತಿ ಹಾಗೂ ಪರಂಪರೆಗಳಿಗೆ ವಿಶ್ವ ಮಟ್ಟದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಿದೆ ಎಂದರು.
ವಿದೇಶಾಂಗ ನೀತಿಯು ದೇಶದ ಜನರ ದಿನನಿತ್ಯದ ಬದುಕಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತೀಯರ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ನಾವು ತಾಳುವ ನಿಲುವು ನಿರ್ಣಾಯಕ ಪಾತ್ರ ವಹಿಸುತ್ತವೆ.