ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…
ಎನ್ನ ಗುರುದೈವರಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು, ಮಂತ್ರಾಲಯವನ್ನು ನೋಡಿದ ಆ ಸವಿಘಳಿಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ನನಗೆ ಚಿಕ್ಕ ವಯಸ್ಸಿನಿಂದಲೂ ಗುರುರಾಯರು ಪ್ರಿಯವಾದ ದೈವ. ಮಂತ್ರಾಲಯಕ್ಕೆ ಹೋಗಬೇಕು ಎಂಬುದು ನನ್ನ ಬಹುದೊಡ್ಡ ಕನಸು. ಸಾಮಾನ್ಯವಾಗಿ ರಾಯರನ್ನು ನಂಬಿದವರಲ್ಲಿ ಈ ಕನಸು ಇದ್ದೇ ಇರುತ್ತದೆ.
ಸುಮಾರು 2-3 ತಿಂಗಳ ಹಿಂದೆ ನಾನಿರುವ ಪಿಜಿಯ ಓನರ್ ಅಂಕಲ್ ಮಂತ್ರಾಲಯಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ರು. ಈ ಪ್ಲಾನ್ ಸುಮಾರು ಎರಡು,ಮೂರು ಬಾರಿ ನಾನಾ ಕಾರಣಗಳಿಂದ ಕ್ಯಾನ್ಸಲ್ ಕೂಡ ಆಗಿತ್ತು. ಫೈನಲ್ ಆಗಿ ಒಂದು ಡೇಟ್ ಫಿಕ್ಸ್ ಆಯ್ತು. ನಾವು ಏಳು ಜನ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಹೊರಟೆವು. ಅಂದು ಶನಿವಾರ ಸಂಜೆ 7.15ಕ್ಕೆ ನಾವುಗಳು ಕಾರಿನಲ್ಲಿ ಮಂತ್ರಾಲಯಕ್ಕೆ ಹೊರಟೆವು.
ನನಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಜೀವನದ ಬಹು ದೊಡ್ಡ ಕನಸು, ನನಸಾಗುತ್ತಿದೆ ಎಂಬ ಖುಷಿ. ನಾವು ಮಂತ್ರಾಲಯವನ್ನು ತಲುಪಬೇಕಾದರೆ ಬೆಳಗಿನ ಜಾವ 3.30 ಆಗಿತ್ತು.
ರಾಯರ ದರ್ಶನದ ಸಮಯ 6 ಗಂಟೆಯಿಂದ ಆರಂಭವಾಗುತ್ತದೆ. ತರಿಗೆ ವಿಶ್ರಾಂತಿ ಪಡೆದುಕೊಳ್ಳಲು,ರೂಮ್ ಗಳನ್ನು ಪಡೆದೆವು.
7.30ರ ಸರಿ ಸುಮಾರಿಗೆ ಬೃಂದಾವನದಲ್ಲಿ ನೆಲೆಸಿರುವ ರಾಯರ ದರ್ಶನ ಪಡೆಯಲು, ತೆರಳಿದೆವು. 8 ಗಂಟೆಗೆ ರಾಯರನ್ನು ನೋಡುವ ಸೌಭಾಗ್ಯ ನನಗೆ ದೊರಕಿತು. ಆ ಎರಡು ನಿಮಿಷ ಗುರುದೈವರ ದರ್ಶನ ಪಡೆಯುವಾಗಲೇ, ನನಗೆ ತಿಳಿಯದೆ ಮೈ ರೋಮಾಂಚನಗೊಂಡು, ನನ್ನ ಕಣ್ಣುಗಳು ಒದ್ದೆಯಾಗಿ, ಮೂಕಳಾದೆ.
ಅಲ್ಲಿಂದ ಹೊರಬಂದು ದೇವಸ್ಥಾನದ ಆವರಣದಲ್ಲಿ ಕುಳಿತೆವು. ಕೆಲ ಕಾಲ ಯಾರ ಬಳಿ ಮಾತನಾಡದೆ ಮೌನವಾಗಿ, ರಾಯರಲ್ಲಿ ನನ್ನೆಲ್ಲ ಭಾವನೆಗಳನ್ನು ಹಂಚಿಕೊಂಡನು. ಸುಮ್ಮನೆ ಹಾಗೆ ಕಣ್ಣು ಮುಚ್ಚಿ, ಇದು ಕನಸ್ಸು ನನಸು ಎಂದು ನನಗೆ ಸಂಶಯ ಉಂಟಾಯಿತು. ನಿಜಕ್ಕೂ ರಾಯರ ದರ್ಶನ ಪಡೆದು ಧನ್ಯಳಾದೆ ಎಂದೆನಿಸಿತು. ಅಲ್ಲಿಂದ, ಪಂಚಮುಖಿ ಆಂಜನೇಯ ದೇವಾಲಯದ ದರ್ಶನ ಪಡೆದು ಹಿಂದಿರುಗಿದೆವು.
ನನ್ನ ರಾಯರ ದರ್ಶನದ ಯಾತ್ರೆಗೆ ಕಾರಣರಾದ ನನ್ನ ಪಿಜಿಯ ಅಂಕಲ್ ಅವರಿಗೆ ನಿಜಕ್ಕೂ ನಾನು ಚಿರಋಣಿ. ನೀವು ಮಂತ್ರಾಲಯದ ಯಾತ್ರೆಯನ್ನ ಕೈಗೊಳ್ಳದಿದ್ದರೆ, ಒಮ್ಮೆಯಾದರೂ ನಿಮ್ಮ ಕುಟುಂಬದವರೊಂದಿಗೆ ರಾಯರ ದರ್ಶನದ ಸೌಭಾಗ್ಯವನ್ನು ಪಡೆದುಕೊಳ್ಳಿ…
- ರಚನಾ.ಕೆ.ಆರ್
