ಕರ್ನಾಟಕ ಏರೊಸ್ಪೇಸ್ ನೀತಿ ಹಾಗೂ ಕರ್ನಾಟಕ ಜಲ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಕ್ಷಣಾ ನೀತಿಗೆ ಪೂರಕವಾಗಿ ರಾಜ್ಯವನ್ನು ಏರೋಸ್ಪೇಸ್ ಹಬ್ ಮಾಡುವುದು, ಪ್ರಸ್ತುತ ಹೆಲಿಕಾಪ್ಟರ್ ಮತ್ತು ವಿಮಾನ ತಯಾರಿ ವಲಯದಲ್ಲಿ ಶೇ.65, ಬಾಹ್ಯಾಕಾಶ ವಲಯದಲ್ಲಿ ಶೇ.25ರಷ್ಟಿರುವ ಪಾಲುದಾರಿಕೆಯನ್ನು ಹೆಚ್ಚಿಸುವುದು ಏರೋಸ್ಪೇಸ್ ನೀತಿಯ ಗುರಿಯಾಗಿದೆ.
ರಾಜ್ಯದಲ್ಲಿ ನೀರಿನ ಸಂಗ್ರಹ, ಬಳಕೆ, ಪೂರೈಕೆ, ಮಿತ ಬಳಕೆ ಒಳಗೊಂಡಂತೆ ನೀರು ನಿರ್ವಹಣೆ ಮಾಡುವುದು. ಪ್ರವಾಹ ಸಂದರ್ಭದಲ್ಲಿ ನೀರು ಹಿಡಿದಿಟ್ಟುಕೊಂಡು ಮರುಬಳಕೆ ಮಾಡುವ ಮಾರ್ಗೋಪಾಯ ಕಂಡು ಹಿಡಿಯುವುದು ಜಲ ನೀತಿಯ ಪ್ರಮುಖ ಉದ್ದೇಶವಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ-2027 ಅಡಿ ನಾಲ್ಕು ವಲಯ ರಚಿಸಿ ರಫ್ತು ಉತ್ತೇಜಿಸಿ, ವಿದ್ಯುತ್, ಭೂ ಪರಿವರ್ತನೆ, ನೋಂದಣಿ ಸಂಬಂಧದ ಅನುಮತಿ ಸೇರಿ ಅನೇಕ ರೀತಿಯ ಸಬ್ಸಿಡಿ ಉದ್ಯಮದಾರರಿಗೆ ಕೊಡಲಾಗುವುದು. 20ರಿಂದ 25 ಲಕ್ಷ ರೂ.ವರೆಗೆ ಸಬ್ಸಿಡಿ ದೊರೆಯಲಿದೆ ಎಂದು ಹೇಳಿದರು.
ಈ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಆತ್ಮನಿರ್ಭರ್ ಯೋಜನೆಯಡಿ ದೇಶೀಯ ಉತ್ಪಾದನೆಯತ್ತ ಗಮನಹರಿಸಲು ಹಾಗೂ ಈ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಈ ನೀತಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
2022-27ನೇ ಅವಧಿಯಲ್ಲಿ 45 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ 200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 70 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನ ನೀಡಿ ಏರೋಸ್ಪೇಸ್ ವಲಯದಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಪರೀಕ್ಷೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಗಾಗಿ 128 ಕಡೆ ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆಗೆ ಸಂಪುಟ ಒಪ್ಪಿದೆ. ಇದರಡಿ ಓರ್ವ ತಜ್ಞ ವೈದ್ಯರು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಇರಲಿದ್ದು, ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ಹಾಗೂ ಚಿಕಿತ್ಸೆಗಾಗಿ ವ್ಯವಸ್ಥೆ ಇರಲಿದೆ. ಇದಕ್ಕಾಗಿ 22.40 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.
ಕೆ.ಶಿಪ್, ಕೆಆರ್‌ಡಿಸಿಎಲ್ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿದ್ದ 1,329.47 ಕಿ.ಮೀ. ರಸ್ತೆಗಳ ನವೀಕರಣ ಮತ್ತು ದುರಸ್ತಿಗೆ 440 ಕೋಟಿ ರೂ. ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
