ಮಂಗಳವಾರ ರಷ್ಯಾವು ಕಝಕ್ಸ್ತಾನದಿಂದ ಇರಾನ್ ನ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸಿದ್ದು ಉಪಗ್ರಹ ಯಶಸ್ವಿಯಾಗಿ ಕಕ್ಷೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಉಕ್ರೇನ್ ನ ಮಿಲಿಟರಿ ನೆರೆಗಳ ಮೇಲೆ ನಿಗಾ ವಹಿಸಲು ಈ ಉಪಗ್ರಹವನ್ನು ಬಳಸುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ನಂತರ ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಬ್ಬಂಟಿಯಾಗುವ ಪ್ರಮೇಯವನ್ನು ನಿವಾರಿಸಿಕೊಳ್ಳಲು ರಷ್ಯಾ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಆಫ್ರಿಕಾ ದೇಶಗಳತ್ತ ಗಮನ ಕೇಂದ್ರೀಕರಿಸಿದ್ದು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಕಝಕ್ಸ್ತಾನದಲ್ಲಿ ರಷ್ಯಾ ನಿಯಂತ್ರಣದಲ್ಲಿರುವ ಬೈಕೊನುರ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ಕಾರ್ಯ ಯಶಸ್ವಿಯಾದ ನಂತರ ಪ್ರತಿಕ್ರಿಯಿಸಿದ ರಷ್ಯಾ ಬಾಹ್ಯಾಕಾಶ ಯೋಜನೆ ಮುಖ್ಯಸ್ಥ ಯೂರಿ ಬೊರಿಸೋವ್ ಇದು ರಷ್ಯಾ ಇರಾನ್ ದ್ವಿಪಕ್ಷೀಯ ಸಹಕಾರ ಕ್ಷೇತ್ರದಲ್ಲಿನ ಪ್ರಮುಖ ಮೈಲುಗಲ್ಲಾಗಿದ್ದು, ನೂತನ ಹಾಗೂ ವಿಸ್ತತ ಯೋಜನೆಗಳ ಅನುಷ್ಟಾನಕ್ಕೆ ಮಾರ್ಗವನ್ನು ತೆರೆದಿದೆ ಎಂದು ಹೇಳಿದ್ದಾರೆ.
ಇದೊಂದು ಐತಿಹಾಸಿಕ ಉಪಕ್ರಮವಾಗಿದ್ದು 2 ದೇಶಗಳ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಇರಾನ್ ನ ದೂರ ಸಂಪರ್ಕ ಸಚಿವ ಇಸ್ಸಾ ಝರೆಪೌರ್ ಹೇಳಿದ್ದಾರೆ.
ಉಪಗ್ರಹದ ನಿಯಂತ್ರಣವನ್ನು ಇರಾನ್ ಗೆ ವಹಿಸಿಕೊಡುವ ಮೊದಲು, ಹಲವು ತಿಂಗಳ ಕಾಲ ಇದನ್ನು ಉಕ್ರೇನ್ ಸೇನಾ ನೆಲೆಯ ಮೇಲೆ ನಿಗಾ ಇರಿಸಲು ಬಳಸಲು ರಷ್ಯಾ ಉದ್ದೇಶಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳ ಗುಪ್ತಚರ ಇಲಾಖೆಯ ಮಾಹಿತಿಯನ್ನು ಉಲ್ಲೇಖಿಸಿ ಕಳೆದ ವಾರ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು.
ಆದರೆ,ಇದನ್ನು ನಿರಾಕರಿಸಿರುವ ಇರಾನ್ ಬಾಹ್ಯಾಕಾಶ ಸಂಸ್ಥೆ ಐಎಸ್‌ಎ, ಉಪಗ್ರಹದ ಮೊದಲ ಸಿಗ್ನಲ್ ಅನ್ನು ತನ್ನ ನಿಯಂತ್ರಣ ಕೇಂದ್ರ ಈಗಾಗಲೇ ಪಡೆದಿದೆ. ಯಾವುದೇ ಮೂರನೇ ದೇಶಕ್ಕೆ ಇದನ್ನು ಪಡೆಯಲು ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದೆ.