ಚಿಕ್ಕ ಮಂಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆಯಿಂದ ಹಲವು ಅವಾಂತರಗಳು ಸಂಭವಿಸಿದ್ದು, ಒಬ್ಬ ವ್ಯಕ್ತಿ ಜೀವ ಕಳೆದು ಕೊಂಡಿದ್ದಾರೆ.
ಈ ಬಾರಿಯ ಮುಂಗಾರಿನ ಅಬ್ಬರಕ್ಕೆ ಚಿಕ್ಕಮಗಳೂರಿನಲ್ಲಿ ಒಟ್ಟು ಮೂರು ಮಂದಿ ಪ್ರಾಣ ಕಳೆದುಕೊಂಡಂತಾಗಿದೆ.
ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರೊಂದು ಕೊಚ್ಚಿ ಹೋದ ಪರಿಣಾಮ ಚಾಲಕ ಪ್ರಸನ್ನ (51) ಮೃತ ಪಟ್ಟಿರುವ ಘಟನೆ ಎನ್ ಆರ್ ಪುರ ತಾಲೂಕಿನ ಸಾತ್ಕೊಳ ಗ್ರಾಮದಲ್ಲಿ ನಡೆದಿದೆ.
ಅರಿಶಿಣಗೆರೆಯ ಪ್ರಸನ್ನ ಅವರು ಸಂಬಂಧಿಕರ ಮನೆಗೆ ಶ್ರಾವಣ ಪೂಜೆ ಕಾರ್ಯಕ್ರಮಕ್ಕೆಂದು ಹೋಗುವಾಗ ಕಾರು ಸಮೇತ ಹಳ್ಳಕ್ಕೆ ಬಿದ್ದಿದ್ದಾರೆ. ರಭಸವಾಗಿ ನೀರು ಹರಿಯುತ್ತಿದ್ದ ಕಾರಣ ನೂರಾರು ಮೀಟರ್ನಷ್ಟು ದೂರ ಕಾರು ಕೊಚ್ಚಿಕೊಂಡು ಹೋಗಿದೆ.
ಸ್ಥಳೀಯರು ಹಳ್ಳದಲ್ಲಿ ಬಿದ್ದಿದ್ದ ಕಾರನ್ನು ಕಂಡು ಪೊಲೀಸರ ಗಮನಕ್ಕೆ ತಂದಿದ್ದು, ನಂತರ ಮೇಲೆತ್ತಲಾಗಿದೆ. ಪ್ರಸನ್ನ ಅವರ ಮೃತ ದೇಹ ಕಾರಿನಲ್ಲಿ ಪತ್ತೆಯಾಗಿದೆ.ಈ ಹಿಂದೆ ಚಿಕ್ಕಮಗಳೂರು ತಾಲೂಕು ಹೊಸಪೇಟೆಯ ಶಾಲಾ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಇನ್ನೂ ಆಕೆ ಪತ್ತೆಯಾಗಿಲ್ಲ. ಮತ್ತೊಂದು ಪ್ರಕರಣದಲ್ಲಿ ಕಳಸ ತಾಲೂಕಿನ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಯುವತಿಯೊಬ್ಬಳು ಮೃತ ಪಟ್ಟಿದ್ದರು.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕುಟುಂಬಸ್ಥರಿಗೆ ಪರಿಹಾರ ವಿತರಿಸಿದೆ.
