ಕಾಮನ್ವೆಲ್ತ್ ಗೇಮ್ಸ್ ಕುಸ್ತಿಯಲ್ಲಿ ಶುಕ್ರವಾರ ಭಾರತದ ದಿನವಾಗಿದೆ. ನಮ್ಮವರು ಭರ್ಜರಿ ಪದಕ ಬೇಟೆಯಲ್ಲಿ ತೊಡಗಿದ್ದಾರೆ.
ಬಜರಂಗ್ ಪುನಿಯ ಮತ್ತು ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.
ಅಂಶು ಮಲಿಕ್ ಬೆಳ್ಳಿ ಗೆದ್ದರು.
ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್ ಪುನಿಯ ಸತತ 2ನೇ ಗೇಮ್ಸ್ ಬಂಗಾರಕ್ಕೆ ಮುತ್ತಿಟ್ಟರು. ಅವರು ಕೆನಡಾದ ಮೆಕ್‌ನೀಲ್ ಅವರನ್ನು 9-2 ಅಂತರದಿಂದ ಚಿತ್ ಮಾಡಿದರು. ಮೊದಲ ಸುತ್ತಿನಲ್ಲೇ 4-0 ಮುನ್ನಡೆ ಸಾಧಿಸಿದ ಬಜರಂಗ್ ಚಿನ್ನವನ್ನು ಖಾತ್ರಿಗೊಳಿಸಿದ್ದರು. ಸೆಮಿಫೈನಲ್‌ನಲ್ಲೂ ಬಜರಂಗ್ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್‌ನ ಜಾರ್ಜ್ ರ್ಯಾಮ್ ವಿರುದ್ಧ 10-0 ಅಂತರದ ಗೆಲುವು ಸಾಧಿಸಿದ್ದರು.
ಇದಕ್ಕೂ ಮೊದಲು ನಡೆದ ವನಿತೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅಂಶು ಮಲಿಕ್ ನೈಜೀರಿಯಾದ ಒಡೊನಾಯೊ ಲಡೆಕ್ಯುರೋಯ್ ವಿರುದ್ಧ 4-8 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟರು. ಕಳೆದೆರಡು ಬಾರಿಯ ಚಾಂಪಿಯನ್ ಆಗಿರುವ ಒಡೊನಾಯೊ ಹ್ಯಾಟ್ರಿಕ್ ಚಿನ್ನ ಗೆದ್ದರು.
ವನಿತೆಯರ 62 ಕೆಜಿ ಫೈನಲ್‌ನಲ್ಲಿ ಸಾಕ್ಷಿ ಮಲಿಕ್ ಕೆನಡಾದ ಅನಾ ಗೊಂಜಾಲೆಸ್ ಅವರನ್ನು ಮಣಿಸಿದರು.
ಫೈನಲ್‌ಗೆ ಲಗ್ಗೆಯಿಟ್ಟ ಮತ್ತೊಬ್ಬರೆಂದರೆ ದೀಪಕ್ ಪುನಿಯ (86 ಕೆಜಿ). ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಮೋಹಿತ್ ಗ್ರೇವಾಲ್ ಹಾಗೂ ದಿವ್ಯಾ ಕಕ್ರಾನ್ ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ.
ದೀಪಕ್ ಪುನಿಯ ಅವರಿಗೆ ಸೆಮಿಫೈನಲ್ ಸವಾಲು ಕಠಿನವಾಗಿ ಪರಿಣಮಿಸಿತು. ಅವರು ಕೆನಡಾದ ಅಲೆಕ್ಸಾಂಡರ್ ಮೂರ್ ವಿರುದ್ಧ 3ರಿಂದ 1 ಅಂತರದಿಂದ ಗೆದ್ದು ಬಂದರು. ಪಾಕಿಸ್ಥಾನದ ಹಾಲಿ ಚಾಂಪಿಯನ್ ಮುಹಮ್ಮದ್ ಇನಾಮ್ ಇವರ ಫೈನಲ್ ಎದುರಾಳಿ.