ಭಾರತ ಮತ್ತು ಚೀನಾ ನಡುವೆ ಆ.05 ರಂದು ವಿಶೇಷ ಸೇನಾ ಮಾತುಕತೆ ಚುಶುಲ್ ಮೋಲ್ಡೋ ಗಡಿ ಭಾಗದಲ್ಲಿ ನಡೆದಿದೆ. ಈಶಾನ್ಯ ಲಡಾಖ್ ನಲ್ಲಿರುವ ಈ ಪ್ರದೇಶದಲ್ಲಿ ಕಳೆದ 45 ದಿನಗಳಿಂದ ಚೀನಾ ಭಾರತೀಯ ವಾಯುಗಡಿಯ ಉಲ್ಲಂಘನೆ ಮಾಡುತ್ತಿದ್ದು ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದೆ.
ವಾಯುಗಡಿಯನ್ನು ಉಲ್ಲಂಘಿಸುವ ಮೂಲಕ ಚೀನಾ ಪ್ರಚೋದನೆಗೆ ಯತ್ನಿಸುತ್ತಿರುವುದರ ಬಗ್ಗೆ ಭಾರತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನಂತರ ಉಭಯ ದೇಶಗಳ ನಡುವೆ ಸೇನಾ ಮಾತುಕತೆ ನಡೆದಿದೆ.
ಸಭೆಯಲ್ಲಿ ಒಂದು ತಿಂಗಳಿನಿಂದ ಚೀನಾದ ಚಟುವಟಿಕೆಗಳ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಕ್ಷಣವೇ ಪ್ರಚೋದನಕಾರಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದೆ.
ಚೀನಾದ ಸೌಹಾರ್ದಯುತ ಸಂಬಂಧ ಅಮೆರಿಕ ಸೇರಿದಂತೆ ಅನೇಕ ದೇಶಗಳೊಂದಿಗೆ ಈಗಾಗಲೇ ಹದಗೆಟ್ಟಿದೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸಭಾಧ್ಯಕ್ಷರು ತೈವಾನ್ ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಪ್ರಯೋಗಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ತೈವಾನ್ ಸಮೀಪದಲ್ಲಿರುವ ಜಪಾನ್ ಗೆ ಸೇರಿದ ವಿಶೇಷ ಆರ್ಥಿಕ ವಲಯ ಮೇಲೆ ಬಿದ್ದಿತ್ತು.
ಸಭೆಯಲ್ಲಿ ಉಭಯ ದೇಶಗಳ ವಾಯುಪಡೆ ಅಧಿಕಾರಿಗಳು ಹಾಗೂ ಸೇನಾ ಪ್ರತಿನಿಧಿಗಳು ಭಾಗವಹಿಸಿದ್ದರು.