ಕೈಮಗ್ಗ ಹಾಗೂ ಜವಳಿ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿರುವ 3 ದಿನಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೈಮಗ್ಗ ಅಂದರೆ, ಸ್ವಾವಲಂಬನೆ ಸಂಕೇತ. ಇದು ಸ್ವತಂತ್ರ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ಕೈಮಗ್ಗದ ಚರಕದ ಬಗ್ಗೆ ಮಹತ್ವವನ್ನ ತಿಳಿಸಿದ ಮಹಾತ್ಮ ಗಾಂಧಿಯವರು ನಮ್ಮ ಬಟ್ಟೆಯನ್ನು ನಾವೇ ತಯಾರು ಮಾಡುಬೇಕೆಂದು ಕರೆ ಕೊಟ್ಟಿದ್ದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ್ ಭಾರತ್ ಎಂದು ಕರೆ ಕೊಟ್ಟಿತ್ತು. ಇದರಲ್ಲಿ ಕೈಮಗ್ಗ ಕೂಡ ಒಂದು. ಇದು ನೇಕಾರರು ಕೂಲಿಕಾರರು ಲಾಭಗಳಿಸುವ ಉದ್ದೇಶಕ್ಕೆ ಇಂದು ಮೇಳವನ್ನ ಆಯೋಜಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನು ಕೂಡ ಕೊಡುತ್ತಿದ್ದೇವೆ. ಅನೇಕ ಯೋಜನೆಗಳನ್ನು ಕೈಮಗ್ಗಕ್ಕೆ ಮೀಸಲಿಟ್ಟಿದ್ದೇವೆ. ಈ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಕೊಡುತ್ತದೆ ಎಂದರು.
ಇಂದಿನಿಂದ ಆ. 7ರವರೆಗೆ ನಡೆಯಲಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಸಹಕಾರ ಸಂಘ ಸಂಸ್ಥೆಗಳು ಭಾಗವಹಿಸಿದೆ. ಮಳಿಗೆಗಳು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ತೆರೆದಿರಲಿವೆ. ಅಲ್ಲದೆ, ಆ.7ರಂದು ಬೆಳಗ್ಗೆ 11.30ಕ್ಕೆ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾನ್ಯ ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಉದ್ಘಾಟಿಸಲಿದ್ದಾರೆ.
ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯತದ ರೇಷ್ಮೆ ಸೀರೆಗಳು, ಕಾಟನ್ ಬೆಡ್ ಶೀಟ್, ಟವೆಲ್, ಲುಂಗಿ, ತುಮಕೂರು, ಚಿತ್ರದುರ್ಗ, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರದ ರೇಷ್ಮೆ ಸೀರೆಗಳು, ದಾವಣಗೆರೆಯ ಟವೆಲ್, ಲುಂಗಿ, ಕರವಸ್ತ್ರ, ಬೆಡ್ಶೀಟ್; ಶಿವಮೊಗ್ಗದ ಕಾಟನ್ ಶರ್ಟ್, ಕಾಟನ್ ಕೋಟ್, ಕುರ್ತಾ, ಮಕ್ಕಳ ಉಡುಗೆ, ಸೀರೆ, ಚಿಕ್ಕಮಗಳೂರು, ಹಾವೇರಿಯ ಕರ್ಚೀಫ್ ಸಹಿತ ಇತರ ಉತ್ಪನ್ನಗಳು ಇವೆ.
ಉಡುಪಿ ಸೀರೆ, ಬೀದರ್‌ನ ರಗ್ಗು, ಕಲಬುರಗಿಯ ಶಾಲು, ಕಂಬಳಿ, ಬಳ್ಳಾರಿಯ ಕಸೂತಿ ಉತ್ಪನ್ನಗಳು, ಧಾರವಾಡದ ಜಮಖಾನ, ಬೆಳಗಾವಿಯ ಸೀರೆ, ಧೋತಿ, ದುಪಟ್ಟಾ, ನ್ಯಾಪ್ಕಿನ್, ಗದಗದ ಪಟ್ಟೆದಂಚು ಸೀರೆ, ಗಾಡಿಧಡಿ ಕಾಟನ್ ಸೀರೆ, ಗೋಮಿಧಡಿ ಸೀರೆ, ಚಿಕ್ಕಿಫರಾಸ್ ಕಾಟನ್ ಸೀರೆ, ವಿಜಯಪುರದ ಜಾಕೆಟ್ ಹಾಗೂ ಬಾಗಲಕೋಟೆಯ ಗುಳೇದಗುಡ್ಡ ಖಣ ಬಟ್ಟೆ, ಖಣ ನೋಟ್ ಬುಕ್, ಖಣ ಶಾಲು, ಇಲಕಲ್ಲ ಸೀರೆಗಳು ದೊರೆಯುತ್ತವೆ.
