ಪ್ರಸಕ್ತ ಸಾಲಿನ ಕಾಮನ್‌ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ)ನಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟ ಮುಹಮ್ಮದ್ ನೂಹ್ ಭಟ್ ಅವರು ಭಾರತದಿಂದ ಸಿಕ್ಕಿರುವ ಪ್ರೀತಿ ಮತ್ತು ಬೆಂಬಲದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ಮೀರಾಬಾಯಿ ಚಾನು ಅವರು ಭಾರತಕ್ಕಷ್ಟೇ ಅಲ್ಲ ನೆರೆಯ ರಾಷ್ಟ್ರಕ್ಕೂ ನೆಚ್ಚಿನ ಕ್ರೀಡಾಪಟು ಎಂಬುದು ಸಾಬೀತಾಗಿದೆ. ನೂಹ್ ಭಟ್ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಅಭಿನಂದಿಸಿದ ಮೊದಲಿಗರ ಪೈಕಿ ಚಾನು ಇದ್ದಿದ್ದು ಉಭಯ ರಾಷ್ಟ್ರದ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಭಾರತದ ಸೂಪರ್‌ಸ್ಟಾರ್ ಮೀರಾಬಾಯಿ ಚಾನು ಅವರ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮೀರಾಬಾಯಿ ಚಾನು ಅವರು ಅಭಿನಂದಿಸಿದ್ದನ್ನು ಮತ್ತು ತಮ್ಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದನ್ನು ‘ಇದೊಂದು ಅತ್ಯದ್ಭುತ ಕ್ಷಣ’ ಎಂದು ನೂಹ್ ಭಟ್ ಬಣ್ಣಿಸಿದ್ದಾರೆ.
ಪುರುಷರ 109+ ಕೆ.ಜಿ ವಿಭಾಗದಲ್ಲಿ ದಾಖಲೆಯ 405 ಕೆ.ಜಿ ಎತ್ತುವ ಮೂಲಕ 24 ವರ್ಷದ ನೂಹ್ ಭಟ್ ಚಿನ್ನದ ಪದಕದ ಸಾಧನೆ ಮಾಡಿದರು.
‘ಮೀರಾಬಾಯಿ ನಮಗೆ ಸ್ಫೂರ್ತಿ. ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಬಂದಿರುವ ನಾವು ಒಲಿಂಪಿಕ್ಸ್ ಪದಕಗಳನ್ನು ಗೆಲ್ಲಬಲ್ಲೆವು ಎಂಬುದನ್ನು ತೋರಿಸಿಕೊಟ್ಟವರು. ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಅವರು ಬೆಳ್ಳಿ ಗೆದ್ದಿದ್ದು ನಮಗೆ ಅಪಾರ ಹೆಮ್ಮೆಯನ್ನುಂಟು ಮಾಡಿದೆ ಎಂದು ನೂಹ್ ಭಟ್ ಹೇಳಿದ್ದಾರೆ.
