ಸಾಲ ಮರುಪಾವತಿಸುವ ಬಗ್ಗೆ ಮಾಡಿಕೊಂಡ ಒಪ್ಪಂದದಲ್ಲಿ ನಮೂದಿಸಿದ ಅವಧಿ ಮುಕ್ತಾಯವಾದ ನಂತರ ಬ್ಯಾಂಕಿಗೆ ಸಲ್ಲಿಸಿದ ಚೆಕ್ ಬೌನ್ಸ್ ಆದಾಗ ಸಾಲ ಪಡೆದ ವ್ಯಕ್ತಿ ವಿರುದ್ಧ ‘ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ ಆಯಕ್ಟ್-1881ರ ಸೆಕ್ಷನ್ 138ರ ಅಡಿಯಲ್ಲಿ ಶಿಕ್ಷಿಸಲು ಅವಕಾಶವಿಲ್ಲ ಎಂದು ಹೈಕೋರ್ಚ್ ಆದೇಶಿಸಿದೆ.
ಬೆಂಗಳೂರಿನ ಜಯನಗರದ 9ನೇ ಬ್ಲಾಕ್ ನಿವಾಸಿ ಕೆ.ಎನ್.ರಾಜು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಇದೇ ವೇಳೆ ರಾಜು ಅವರಿಂದ ಸಾಲ ಪಡೆದಿದ್ದ ಮಂಜುನಾಥ್ ಅವರನ್ನು ಖುಲಾಸೆಗೊಳಿಸಿದ ಮ್ಯಾಜಿಸ್ಪ್ರೇಟ್ ಕೋರ್ಚ್ ಆದೇಶವನ್ನು ಪುರಸ್ಕರಿಸಿದೆ. ಉತ್ತರಹಳ್ಳಿಯ ಬಂಗಾರಪ್ಪ ಲೇಔಟ್ ನಿವಾಸಿ ಟಿ.ವಿ.ಮಂಜುನಾಥ್, ಮೇಲ್ಮನವಿದಾರ ರಾಜು ಅವರಿಂದ 2004ರ ಅ.29ರಂದು 70 ಸಾವಿರ ರು. ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತಾ ಖಾತರಿಯಾಗಿ 3 ಚೆಕ್ ನೀಡಿದ್ದ ಮಂಜುನಾಥ್, 3 ವರ್ಷದಲ್ಲಿ ಸಾಲ ಮರು ಪಾವತಿ ಮಾಡುವುದಾಗಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು.
ಮಂಜುನಾಥ್ ಸೂಚನೆ ಮೇರೆಗೆ ರಾಜು 2008ರ ಮೇ 28ರಂದು 3 ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ, ಮಂಜುನಾಥ್ ಸಹಿ ವ್ಯತ್ಯಾಸ ಅಥವಾ ಅಪೂರ್ಣ ಇದ್ದ ಮತ್ತು ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ 2008ರ ಆ.29ರಂದು ಚೆಕ್ ಬೌನ್ಸ್ ಆಗಿತ್ತು. ಇದರಿಂದ ರಾಜು 2008ರ ಸೆ.26ರಂದು ಲೀಗಲ್ ನೋಟಿಸ್ ನೀಡಿ ಹಣ ಹಿಂದಿರುಗಿಸುವಂತೆ ಸೂಚಿಸಿದ್ದರು. ಲೀಗಲ್ ನೋಟಿಸ್ ಸ್ವೀಕರಿಸಿದರೂ ಮಂಜುನಾಥ್ ಉತ್ತರ ನೀಡಲಿಲ್ಲ.
ಸಾಲದ ಹಣ ಹಿಂದಿರುಗಿಸದೆ ಇದ್ದಾಗ ರಾಜು ಅವರು ಎನ್‌ಐ ಕಾಯ್ದೆ ಸೆಕ್ಷನ್ 138ರ ಅಡಿಯಲ್ಲಿ ಚೆಕ್ ಬೌನ್ಸ್ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 16ನೇ ಎಸಿಎಂಎಂ ನ್ಯಾಯಾಲಯ ಮಂಜುನಾಥ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ 2009ರ ಡಿ.17ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜು ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು.