ಉತ್ತರ ಕರ್ನಾಟಕದಲ್ಲಿ ಕಂಡುಬರುವ ಗಾಣಿಗೇರ್ ಎಂಬುದು ಗಾಣಿಗ ಪದದ ರೂಪಾಂತರವಾಗಿದೆ. ಹಿಂದೂ ಗಾಣಿಗ ಮತ್ತು ಲಿಂಗಾಯತ ಗಾಣಿಗ 2 ವಿಭಿನ್ನ ಜಾತಿಗಳಲ್ಲ. ಎರಡೂ ಒಂದೇ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಒಬಿಸಿ ಮೀಸಲಾತಿಗಾಗಿ ಸಂಗಪ್ಪ ಹಸನಪ್ಪ ಮಾಳೆಣ್ಣನವರ್ ಎಂಬುವರಿಗೆ ನೀಡಿದ್ದ ಗಾಣಿಗ ಜಾತಿ ಪ್ರಮಾಣ ಪತ್ರದ ವಿರುದ್ಧ ಏಕ ಪೀಠದ ತೀರ್ಪನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಎಂವಿ ಚಂದ್ರಕಾಂತ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರ ಪೀಠ ವಜಾಗೊಳಿಸಿದೆ.
ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಗೆ ಆಯ್ಕೆಯಾದ 1999ರ ಬ್ಯಾಚ್ ಅಭ್ಯರ್ಥಿಗಳಲ್ಲಿ ಸಂಗಪ್ಪ ಕೂಡ ಒಬ್ಬರು. ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಚಂದ್ರಕಾಂತ್ ಹಾಗೂ ಸಹಾಯಕ ಆಯುಕ್ತ ಹುದ್ದೆಗೆ ಸಂಗಪ್ಪ ಆಯ್ಕೆಯಾಗಿದ್ದಾರೆ. 2005ರಲ್ಲಿ ಸಂಗಪ್ಪ ಅವರ ತಂದೆ ಲಿಂಗಾಯತ ಜಾತಿಗೆ ಸೇರಿದವರು ಎಂದು ತನಗೆ ಗೊತ್ತಾಯಿತು. ಆದರೆ, ಸಂಗಪ್ಪ ಅವರು ಗಾಣಿಗ ಜಾತಿಗೆ ಸೇರಿದವರು ಎಂದು ಹೇಳಿಕೊಂಡು ಮೀಸಲಾತಿಯ ಲಾಭವನ್ನು ಪಡೆದಿದ್ದರು ಎಂದು ಚಂದ್ರಕಾಂತ್ ವಾದಿಸಿದರು.
ಈ ವಿಷಯ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಪೀಠವು, ಸಂಗಪ್ಪ ಅವರ ತಂದೆ ಹಿಂದೂ ಲಿಂಗಾಯತ ಜಾತಿಗೆ ಸೇರಿದವರು ಎಂದು ಶಾಲೆಯ ದಾಖಲೆಗಳು ಬಹಿರಂಗಪಡಿಸುತ್ತವೆ. ಆದರೆ, ಅವರ ಮಗ ಗಾಣಿಗ ಸಮುದಾಯ ಎಂದು ಹೇಳಿಕೊಂಡಿರುವುದು ಸರಿಯಲ್ಲ ಎಂದಿತ್ತು. ಆದರೆ, ವಿಭಾಗೀಯ ಪೀಠವು ಏಕ ಪೀಠದ ಆದೇಶವನ್ನು ತಳ್ಳಿಹಾಕಿತು.
