ಯುಕೆ ಪ್ರಧಾನಮಂತ್ರಿ ಹುದ್ದೆಯ ಪೈಪೋಟಿ ಅಂತಿಮ ಹಂತಕ್ಕೆ ಬಂದಿದೆ.
ಅಚ್ಚರಿಯ ವಿದ್ಯಮಾನದಲ್ಲಿ ರಿಷಿ ಸುನಕ್ ಅವರು ಪ್ರಧಾನಿ ಸ್ಥಾನ ಅಲಂಕರಿಸುತ್ತಾರೆ ಎನ್ನುವ ಮಾತುಗಳೀಗ ತಲೆಕೆಳಗಾಗುತ್ತಿವೆ.
ಮುಂದಿನ ಪ್ರಧಾನಿಯಾಗುವ ಓಟದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರಿಗಿಂತ ಶೇ. 90 ರಷ್ಟು ಹಿಂದಿದ್ದಾರೆ ಎಂದು ಬೆಟ್ಟಿಂಗ್ ವಿನಿಮಯ ಸಂಸ್ಥೆ ಸ್ಮಾರ್ಕೆಟ್ಸ್ ಅಂದಾಜಿಸಿದೆ.
ಲೀಡ್ಸ್ನಲ್ಲಿ ಕನ್ಸರ್ವೇಟಿವ್ ಪಕ್ಷದ ಸದಸ್ಯರ ಸಮ್ಮುಖದಲ್ಲಿ ನಡೆದ ಮೊದಲ ಅಧಿಕೃತ ಚರ್ಚೆಯಲ್ಲಿ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾದರು.
ಸ್ಮಾರ್ಕೆಟ್ಸ್ ಪ್ರಕಾರ, ಇಲ್ಲಿ ನಡೆದ ಪಕ್ಷದ ಸದಸ್ಯರ ಸಮೀಕ್ಷೆಯಲ್ಲಿ ರಿಷಿ ಸುನಕ್ ಅವರು ಪ್ರಧಾನಿಯಾಗುವ ಅವಕಾಶ ಶೇ. 10ಕ್ಕೆ ಕುಸಿದಿದ್ದು, ಟ್ರಸ್ ಶೇ.89.29ರಷ್ಟು ರೇಟಿಂಗ್ ಪಡೆದಿದ್ದಾರೆ.
ತಮ್ಮ ಕೊನೆಯ ಚರ್ಚೆಯಲ್ಲಿ ಲಿಜ್ ಟ್ರಸ್, ತೈಲ ಮತ್ತು ಅನಿಲ ಕಂಪೆನಿಗಳ ಮೇಲೆ ಮತ್ತಷ್ಟು ವಿಂಡ್ಫಾಲ್ ತೆರಿಗೆಗಳನ್ನು ವಿಧಿಸದಿರಲು ಬಯಸುತ್ತೇನೆ ಎಂದು ಹೇಳಿರುವುದು ಅವರ ಶೇಕಡಾವಾರು ಅವಕಾಶವನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದಿದೆ. ಜೀವನಮಟ್ಟ ಕುಸಿತ ಎದುರಿಸುತ್ತಿರುವ ಬ್ರಿಟನ್ನಲ್ಲಿ ತಕ್ಷಣ ತೆರಿಗೆ ಕಡಿತಗೊಳಿಸುವ ಕುರಿತು ಪ್ರತಿಜ್ಞೆ ಮಾಡಿದ ಟ್ರಸ್, ಸದಸ್ಯರ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಮೀಕ್ಷೆಯ ಪ್ರಕಾರ, ಶೇಕಡಾ 31 ರಷ್ಟು ಸದಸ್ಯರು ರಿಷಿ ಸುನಕ್‌ಗೆ ಮತ ಹಾಕಲು ಉದ್ದೇಶಿಸಿದ್ದರೆ, ಶೇಕಡಾ 49 ರಷ್ಟು ಜನರು ಲಿಜ್ ಟ್ರಸ್‌ಗೆ ಮತ ಹಾಕಲು ತೀರ್ಮಾನಿಸಿದ್ದಾರೆ. ಇನ್ನೂ 15 ಪ್ರತಿಶತದಷ್ಟು ಸದಸ್ಯರು ಯಾರಿಗೆ ಮತ ಚಲಾಯಿಸುತ್ತಾರೆ ಎಂಬುದು ತಿಳಿದಿಲ್ಲ.
ಅದಲ್ಲದೆ 6 ಪ್ರತಿಶತದಷ್ಟು ಸದಸ್ಯರು ಪ್ರಸ್ತುತ ಮತದಾನದಿಂದ ದೂರವಿರುವುದಾಗಿ ಹೇಳಿದ್ದಾರೆ.