ಮನುಷ್ಯನ ಆಧುನಿಕ ಜೀವನಕ್ಕೆ ನೀರು, ಆಹಾರದಷ್ಟೇ ವಿದ್ಯುತ್ತಿನ ಅವಶ್ಯಕತೆ ಇದೆ. 8 ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಹೇಳಿದ್ದಾರೆ.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಉಜ್ಜಲ ಭಾರತ, ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ವಿದ್ಯುತ್ ಇಲ್ಲದಿದ್ದರೆ ಆ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ದೇಶದಲ್ಲಿ ಪವನ ಶಕ್ತಿ, ಸೌರಶಕ್ತಿ ಮತ್ತು ಜಲಶಕ್ತಿ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಭಾರತ ಶೇ. 40ರಷ್ಟು ಪ್ರತಿಶತ ನವೀಕರಿಸಬಹುದಾದ ಇಂಧನ ಮೂಲಗಳಿಂದ 175l ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಈ ಹಿಂದೆ ಸರಾಸರಿ ಎರಡು ಲಕ್ಷ ಮೆಗಾವ್ಯಾಟ್ ವಿದ್ಯುತ್‍ನ್ನು ಉತ್ಪಾದನೆಯಾಗುತ್ತಿತ್ತು, ಈಗ ನಾಲ್ಕು ಲಕ್ಷ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಬ್ಬ ನಾಗರಿಕರು ಆಗಸ್ಟ್ 13 ರಿಂದ ಆಗಸ್ಟ್ 15ರ ವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಉತ್ಸಾಹದಿಂದ ಹಾರಿಸಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಜೆಸ್ಕಾಂ ಅಧಿಕಾರಿಗಳು ನಿರಂತರವಾಗಿ ರೈತರಿಗೆ ವಿದ್ಯುತ್ ಕೊಡಬೇಕು. ಹಳ್ಳಿಗಳಲ್ಲಿ ಬೋರ್‌ವೆಲ್ ಹಾಕಿದ ಮೇಲೆ ಅವುಗಳಿಗೆ ಅಳವಡಿಸುವ ಮೋಟರ್‌ಗಳಿಗೆ ತ್ವರಿತ ವಿದ್ಯುತ್ ಸಂಪರ್ಕ ಕೊಡಬೇಕು ಎಂದು ಸೂಚಿಸಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಮ್ ಖಾನ್ ಮಾತನಾಡಿ, ವಿದ್ಯುತ್, ಆಸ್ಪತ್ರೆ, ಪೊಲೀಸ್ ಸೇರಿದಂತೆ ಪ್ರಮುಖ ಇಲಾಖೆಗಳು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜನರಿಗೆ ತೊಂದರೆಯಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೆ.ಇ.ಬಿ.ಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಮುಂದಿನ ದಿನಮಾನಗಳಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೋದ್ದಿನ್ ಕಚೇರಿವಾಲೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಜೆಸ್ಕಾಂ ಬೀದರ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಸಚಿನ್ ಹುಂಡೆಕರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.