ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಒದಗಿಸಿದೆ.
ಈ ಕುರಿತು ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ.
ವೀರಪ್ಪ ಹಾಗೂ ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆ ಬಂದಿತ್ತು.
ಈ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಲ್ಲಿಸಿರುವ ಸಮಗ್ರ ಮಾಹಿತಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಲಾಗಿದ್ದು, ಇನ್ನೂ 1,454 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 1,006 ಗ್ರಾಮಗಳು ಬೇಚರಾಕ್ ಗ್ರಾಮಗಳಾಗಿವೆ ಎಂದು ಸರ್ಕಾರ ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.
ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಗ್ರಾಮವಾರು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 2022ರ ಜೂ.30ರಂದು ಆದೇಶ ನೀಡಿತ್ತು.
ಅದರಂತೆ ಸರ್ಕಾರ, ಎಲ್ಲಾ 31 ಜಿಲ್ಲೆಗಳ 27,099 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಿರುವ ಜಿಲ್ಲಾಧಿಕಾರಿಗಳ ಆದೇಶ, ಆರ್‌ಟಿಸಿ ಮತ್ತು ಕಂದಾಯ ದಾಖಲೆಗಳ ಸಮಗ್ರ ಮಾಹಿತಿಯನ್ನು ಸಲ್ಲಿಸಿದೆ.