ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾದಲ್ಲಿ ಆಸ್ಪತ್ರೆಗಳೂ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದು ವಿದ್ಯುತ್ ಪೂರೈಕೆಯಿಲ್ಲದೆ ವಾರ್ಡ್ಗಳು ಕಗ್ಗತ್ತಲಿನಲ್ಲಿ ಮುಳುಗಿದೆ. ದೇಶದ ಪ್ರಮುಖ ಆಸ್ಪತ್ರೆ ನ್ಯಾಷನಲ್ ಹಾಸ್ಪಿಟಲ್ನಲ್ಲಿ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.
ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳು ಪೂರ್ಣ ಗುಣಮುಖರಾಗುವ ಮುನ್ನವೇ ಅವರನ್ನು ಡಿಸ್ಚಾರ್ಜ್ ಮಾಡಿ, ಮುಂದಿನ ಔಷಧವನ್ನು ಖಾಸಗಿ ಕ್ಲಿನಿಕ್ನಲ್ಲಿ ಪಡೆಯಲು ಸೂಚಿಸಲಾಗುತ್ತಿದೆ. ವೈದ್ಯರ ಪಾಳಿ (ಶಿಫ್ಟ್) ಕೂಡಾ ನಿಂತುಹೋಗಿದೆ ಎಂದು ತಿಳಿದುಬಂದಿದೆ.
ಆರ್ಥಿಕ ಬಿಕ್ಕಟ್ಟು ಉಚಿತ ಮತ್ತು ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಗೆ ಮಾರಣಾಂತಿಕ ಪ್ರಹಾರ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶ್ರೀಲಂಕಾ ತನ್ನ 85% ಔಷಧ ಮತ್ತು ಔಷಧ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಆದರೆ ದೇಶವು ಈಗ ದಿವಾಳಿಯ ಅಂಚಿನಲ್ಲಿರುವುದರಿಂದ ವಿದೇಶಿ ವಿನಿಮಯ ದಾಸ್ತಾನು ಬರಿದಾಗಿದೆ. ಇದರಿಂದ ಸಾಕಷ್ಟು ಪ್ರಮಾಣದ ತೈಲ ಮತ್ತು ಔಷಧವನ್ನು ಆಮದು ಮಾಡಿಕೊಳ್ಳಲು ತೊಡಕಾಗುತ್ತಿದೆ. ಸಾಮಾನ್ಯ ನೋವು ನಿವಾರಕಗಳು, ಆಯಂಟಿ ಬಯಾಟಿಕ್ಗಳು, ಶಿಶುಗಳ ಔಷಧಗಳ ತೀವ್ರ ಕೊರತೆಯಿದೆ. ಇತರ ಔಷಧಗಳು ಅಲ್ಪಪ್ರಮಾಣದಲ್ಲಿ ಲಭ್ಯವಿದ್ದರೂ ಕಳೆದ 3 ತಿಂಗಳಲ್ಲಿ ದರ ನಾಲ್ಕುಪಟ್ಟು ಹೆಚ್ಚಿದೆ ಎಂದು ಔಷಧ ಅಂಗಡಿಯ ಮಾಲಕರು ಹೇಳಿದ್ದಾರೆ.
ಒಂದೊಮ್ಮೆ ಬಲಿಷ್ಟವಾಗಿದ್ದ ಶ್ರೀಲಂಕಾದ ಆರೋಗ್ಯಸೇವಾ ವ್ಯವಸ್ಥೆ ಈಗ ಅಪಾಯದಲ್ಲಿದೆ. ದುರ್ಬಲ ವರ್ಗದವರು ಅತೀ ಹೆಚ್ಚಿನ ತೊಂದರೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಹನಾ ಸಿಂಗರ್-ಹಮ್ದಿ ಆತಂಕ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ತುರ್ತು ಅಗತ್ಯವಿರುವ ಔಷಧಗಳ ಮತ್ತು ರೇಬೀಸ್ ನಿರೋಧಕ ಲಸಿಕೆಗಳ ಆಮದಿಗೆ ನೆರವು ನೀಡುವುದಾಗಿ ವಿಶ್ವಬ್ಯಾಂಕ್ ಘೋಷಿಸಿದೆ.
ಈಗ ಇರುವ ಆರ್ಥಿಕ ವಿಪತ್ತು ಮುಂದುವರಿದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಕುಸಿತದ ಅಂಚಿಗೆ ತಲುಪಬಹುದು. ಶ್ರೀಲಂಕಾದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಪರಾಕಾಷ್ಟೆಗೆ ತಲುಪಿ ಇನ್ನಷ್ಟು ಶಿಶುಗಳು ಸಾವನ್ನಪ್ಪಬಹುದು ಎಂದು ಡಾ. ವಾಸನ್ ರತ್ನಸಿಂಗಮ್ ಹೇಳಿದ್ದಾರೆ.