ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲು ವಿಫಲವಾದರೆ ನಾವೇ ಜಾಮೀನು ಆದೇಶವನ್ನು ಹೊರಡಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿದೆ ಎಂದು ಮಾಧ್ಯಮಯೊಂದರ ವರದಿಯಿಂದ ತಿಳಿದುಬಂದಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಎಂಎಂ ಸುಂದ್ರೇಶ್ ಅವರು 853 ಜನರು 10 ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದಾರೆ ಮತ್ತು ಅವರ ಕ್ರಿಮಿನಲ್ ಮೇಲ್ಮನವಿಗಳನ್ನು ನಿರ್ಧರಿಸಲಾಗಿಲ್ಲ ಎಂದು ತಿಳಿಸಿದರು.
12 ವರ್ಷಗಳಿಂದ ಜೈಲಿನಲ್ಲಿರುವ ಸುಲೇಮಾನ್ ಎಂಬ ಉತ್ತರ ಪ್ರದೇಶದ ನಿವಾಸಿಯ ಅರ್ಜಿಯನ್ನು ನ್ಯಾಯಮೂರ್ತಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಅವರ ಮನವಿಯ ವಿಚಾರಣೆಗೆ ಹೈಕೋರ್ಟ್ ಪೀಠ ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ನೀವು ಅದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ನಾವು ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೈಕೋರ್ಟ್ ಹಾಗೂ ರಾಜ್ಯ ಎರಡರಲ್ಲೂ ಸಮಸ್ಯೆ ಇದೆ. ನೀವು ಈ ಜನರನ್ನು ಅನಿರ್ದಿಷ್ಟವಾಗಿ ಕಂಬಿಗಳ ಹಿಂದೆ ಹಾಕಲು ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿಕೆ ನೀಡಿದೆ.
ಎಷ್ಟು ಏಕ ಅಪರಾಧ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಜಾಮೀನಿಗೆ ಪರಿಗಣಿಸಬಹುದು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪರ್ಷದ್ ಅವರನ್ನು ನ್ಯಾಯಾಲಯ ಪ್ರಶ್ನಿಸಿದೆ ಎಂದು ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯವು ಇನ್ನೂ ಪಟ್ಟಿಯನ್ನು ಪರಿಶೀಲಿಸಬೇಕಾಗಿದೆ. ಮತ್ತು ಒಂದೇ ಅಪರಾಧಗಳನ್ನು ಮಾಡಿದ ವ್ಯಕ್ತಿಗಳನ್ನು ಅನೇಕ ಪ್ರಕರಣಗಳಲ್ಲಿ ಬಂಧಿಯಾಗಿರುವವರಿಂದ ಪ್ರತ್ಯೇಕಿಸಬೇಕಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಮೇ 9 ರಂದು, ಈ ಪ್ರಕರಣದ ಕೊನೆಯ ವಿಚಾರಣೆಯ ವೇಳೆ, ಉತ್ತರ ಪ್ರದೇಶ ಸರ್ಕಾರ ಹಾಗೂ ಅಲಹಾಬಾದ್ ಹೈಕೋರ್ಟ್ 350 ಅಪರಾಧಿಗಳ ಜಾಮೀನು ಅರ್ಜಿಗಳು 10 ವರ್ಷಗಳಿಂದ ಬಾಕಿ ಉಳಿದಿವೆ ಮತ್ತು 159 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿರುವವರು ಎಂದು ತಿಳಿಸಿತ್ತು.