ಏಷ್ಯಾ ಖಂಡದ ಸೂಪರ್ ಪವರ್ ಆಗಿರುವ ಚೀನಾ, ಬ್ರಿಟನ್ ಸೇರಿದಂತೆ ವಿಶ್ವದ ಸುರಕ್ಷತೆಗೆ ಬಹುದೊಡ್ಡ ಬೆದರಿಕೆ ಎಂದಿರುವ ರಿಷಿ ಸುನಕ್, ಒಂದೊಮ್ಮೆ ತಾವು ಮುಂದಿನ ಬ್ರಿಟನ್ ಪ್ರಧಾನ ಮಂತ್ರಿಯಾದಲ್ಲಿ ಚೀನಾ ವಿರುದ್ಧ ಕಠಿಣ ನಿಲುವು ತಳೆಯುವುದಾಗಿ ತಿಳಿಸಿದ್ದಾರೆ. ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆಯುತ್ತಿರುವ ಚುನಾವಣೆಯ ಕೊನೆಯ ಎರಡು ಹಂತಗಳಲ್ಲಿ ಅಧಿಕಾರಾರೂಢ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಮುನ್ನಡೆ ಸಾಧಿಸಿದ್ದಾರೆ. ರಿಷಿ ಸುನಕ್ ಚೀನಾ ಹಾಗೂ ರಷ್ಯಾ ಬಗ್ಗೆ ಮೃದು ನಿಲುವು ಹೊಂದಿದ್ದಾರೆ ಎಂದು ಟ್ರಸ್ ಆರೋಪಿಸಿದ ನಂತರ ಸುನಕ್ ಈ ಬಗ್ಗೆ ತಿರುಗೇಟು ನೀಡಿದ್ದಾರೆ.
ಪ್ರಸಕ್ತ ಬ್ರಿಟನ್ ಚುನಾವಣೆಯಲ್ಲಿ, ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನ ಹೊಂದಿರುವ ಏಕೈಕ ನಾಯಕ ರಿಷಿ ಸುನಕ್ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಹೊಗಳಿತ್ತು.
ಬ್ರಿಟನ್ನಲ್ಲಿ ಇರುವ 30 ಕನ್ಫೂಷಿಯಸ್ ಇನ್ಸ್ಟಿಟ್ಯೂಟ್ಗಳನ್ನು ಮುಚ್ಚುವುದು ಮತ್ತು ಆ ಮೂಲಕ ಬ್ರಿಟನ್ನಲ್ಲಿ ಚೀನಾ ಸಂಸ್ಕೃತಿ ಹಾಗೂ ಭಾಷಾ ಕಾರ್ಯಕ್ರಮಗಳ ಮೂಲಕ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದನ್ನು ತಡೆಗಟ್ಟುವ ಪ್ರಸ್ತಾವನೆಗಳನ್ನು ಸುನಕ್ ಮುಂದಿಟ್ಟಿದ್ದಾರೆ. ಚೀನಾ ಕಮ್ಯುನಿಸ್ಟ್ ಪಾರ್ಟಿಯನ್ನು ಬ್ರಿಟನ್ನ ವಿಶ್ವವಿದ್ಯಾಲಯಗಳಿಂದ ಒದ್ದೋಡಿಸುವುದಾಗಿಯೂ ಸುನಕ್ ಆಶ್ವಾಸನೆ ನೀಡಿದ್ದಾರೆ. ಇದಕ್ಕಾಗಿ 60 ಸಾವಿರ ಡಾಲರ್ ಮೊತ್ತದ ವಿದೇಶಿ ಫಂಡಿಂಗ್ ಮತ್ತು ಸಂಶೋಧನಾ ಒಡಂಬಡಿಕೆಗಳ ಬಗೆಗಿನ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ಬಹಿರಂಗಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಚೀನಾದ ಬೇಹುಗಾರಿಕೆಯನ್ನು ತಡೆಗಟ್ಟಲು ಬ್ರಿಟನ್ನ ಆಂತರಿಕ ಗುಪ್ತಚರ ಸಂಸ್ಥೆ MI5 ನೆರವು ಪಡೆಯುವುದು, ಸೈಬರ್ ಕ್ಷೇತ್ರದಲ್ಲಿ ಚೀನಾದಿಂದ ಸಂಭಾವ್ಯ ದಾಳಿಗಳನ್ನು ಎದುರಿಸಲು ನ್ಯಾಟೊ ಮಾದರಿಯ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ ಸ್ಥಾಪಿಸುವುದು, ರಕ್ಷಣಾ ದೃಷ್ಟಿಯಿಂದ ಸೂಕ್ಷ್ಮ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಬ್ರಿಟನ್ನ ಪ್ರಮುಖ ಸಂಸ್ಥೆಗಳನ್ನು ಚೀನಾ ವಶಪಡಿಸಿಕೊಳ್ಳುವುದನ್ನು ತಡೆಗಟ್ಟುವುದು ಇವೇ ಮುಂತಾದ ಕ್ರಮಗಳನ್ನು ತಾವು ಕೈಗೊಳ್ಳುವುದಾಗಿ ಸುನಕ್ ಇಂಗಿತ ವ್ಯಕ್ತಪಡಿಸಿದ್ದಾರೆ.
ಚೀನಾ ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಸುನಕ್ ಪ್ರತಿಪಾದಿಸಿದ್ದಾರೆ.
ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಲಾದಿಮಿರ್ ಪುಟಿನ್ ಅವರನ್ನು ಮೇಲಕ್ಕೆತ್ತಲು ನೋಡುತ್ತಿದೆ. ತೈವಾನ್ ಸೇರಿದಂತೆ ನೆರೆಹೊರೆ ರಾಷ್ಟ್ರಗಳನ್ನು ಬೆದರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಸುನಕ್ ಅವರುಹೇಳಿದ್ದಾರೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ಜೋರಾಗಿದ್ದು, ಸೆಪ್ಟೆಂಬರ್ 5 ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.