ನಾಲ್ಕು ಚಕ್ರಗಳ ವೈಯಕ್ತಿಕ ವಾಹನ ಹೊಂದಿದ್ದರೂ ನಿಯಮಕ್ಕೆ ವಿರುದ್ಧವಾಗಿ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ, ಅಂತವರು ದಂಡ ಕಟ್ಟಬೇಕಾಗುತ್ತದೆ.
ಹೌದು, ಇಂಥವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದ 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಸರ್ಕಾರವು ಈ ಪಡಿತರ ಚೀಟಿ ಹಿಂದೊಪ್ಪಿಸಲು ಅನೇಕ ಅವಕಾಶ ನೀಡಿದ್ದರೂ ನಿರ್ಲಕ್ಷಿಸಿದ ಅನರ್ಹರ ಮಾಹಿತಿ ಸಂಗ್ರಹಿಸಿ ಅವರಿಂದ ಈ ತನಕ ಪಡೆದ ಆಹಾರ ಸಾಮಗ್ರಿಗೆ ದಂಡ ವಸೂಲಿ ಮಾಡಲಿದೆ.
4 ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ, ಅಂಥವರು ದಂಡ ರಹಿತವಾಗಿ 2019ರ ಸೆ.3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ವಾಪಸ್ ಕೊಟ್ಟು, ರದ್ದು ಮಾಡಿಸುವಂತೆ ಸರ್ಕಾರ ಸೂಚನೆ ನೀಡಿತ್ತು.ನಂತರ ಅವಧಿಯನ್ನು ಅ.15ರ ತನಕ ವಿಸ್ತರಿಸಿತು. ಹೀಗೆ ಒಟ್ಟು ಹಲವು ಬಾರಿ ಸರೆಂಡರ್‌ಗೆ ಅವಕಾಶ ನೀಡಲಾಗಿತ್ತು. ಆದರೂ ರದ್ದು ಮಾಡದೇ ಸೌಲಭ್ಯ ಪಡೆಯುತ್ತಿರುವ ಅನರ್ಹ ಪಡಿತರ ಚೀಟಿದಾರರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.