ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇದೀಗ ವರ್ಷದ ಸಂಭ್ರಮ.
ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಸಿಎಂ ಬೊಮ್ಮಾಯಿ ನೂರೆಂಟು ಸವಾಲು-ಸಂಕಷ್ಟಗಳನ್ನೂ ಎದುರಿಸಬೇಕಾಯಿತು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೊಮ್ಮಾಯಿ ಸಿಎಂ ಪಟ್ಟ ಅಲಂಕರಿಸಿದರು. ಜನಪರ ಆಡಳಿತ ಘೋಷಣೆಯೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಬೊಮ್ಮಾಯಿ ಸರ್ಕಾರಕ್ಕೆ ಆಡಳಿತದ ಹಾದಿ ಹುಲ್ಲಿನ ಹಾಸಾಗಿರಲಿಲ್ಲ. ವರ್ಷದ ತಮ್ಮ ಆಡಳಿತದಲ್ಲಿ ಅನಿಶ್ಚಿತತೆ, ನೂರೆಂಟು ಸವಾಲುಗಳನ್ನು ಎದುರಿಸುವಂತಾಯಿತು. ಒಂದೆಡೆ ಆಡಳಿತಕ್ಕೆ ಚುರುಕು, ಇನ್ನೊಂದೆಡೆ ದಿಟ್ಟ ನಾಯಕತ್ವದೊಂದಿಗೆ ಭ್ರಷ್ಟಾಚಾರ ರಹಿತ ಆಡಳಿತ, ಮತ್ತೊಂದೆಡೆ ಜನಪರ ಯೋಜನೆಗಳೊಂದಿಗೆ ಚುನಾವಣೆ ವರ್ಷದಲ್ಲಿ ರಾಜ್ಯದ ಜನರಿಗೆ ಸನಿಹವಾಗುವ ಸವಾಲುಗಳೊಂದಿಗೆ ಬೊಮ್ಮಾಯಿ ಸರ್ಕಾರ ವರ್ಷದ ಹಾದಿ ಕ್ರಮಿಸಿದೆ.
ಬೊಮ್ಮಾಯಿ ಸರ್ಕಾರಕ್ಕೆ ಯಡಿಯೂರಪ್ಪರಂತಹ ನಾಯಕನ ಸ್ಥಾನ ತುಂಬಿಸುವ ಸವಾಲಿನ ಜೊತೆಗೆ ಸಹದ್ಯೋಗಿಗಳನ್ನು ಒಟ್ಟಿಗೆ ಕೊಂಡೊಯ್ಯುವ ಅಗ್ನಿಪರೀಕ್ಷೆ ಎದುರಾಗಿತ್ತು. ಆಂತರಿಕ ವೈಮನಸ್ಸು, ಬಣಗಳನ್ನು ಒಟ್ಟಾಗಿ ಕೊಂಡೊಯ್ಯುವ ದೊಡ್ಡ ಸವಾಲಿನೊಂದಿಗೆ ಬೊಮ್ಮಾಯಿ ಆಡಳಿತ ನಡೆಸಿದರು.
ಬೊಮ್ಮಾಯಿ ಸರ್ಕಾರವನ್ನು ಅತಿಯಾಗಿ ಕಾಡಿರುವುದು ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟದ ಬರೆ. ಎರಡನೇ ಅಲೆಗೆ ಹೇರಿದ ಲಾಕ್ಡೌನ್ನಿಂದ ಆಗಲೇ ಸೊರಗಿದ ಬೊಕ್ಕಸವನ್ನು ಮತ್ತಷ್ಟು ಮಂಡಿಯೂರವಂತೆ ಮಾಡಿತು. ಇದರಿಂದ ಬೊಮ್ಮಾಯಿ ಸರ್ಕಾರಕ್ಕೆ ಹಣಕಾಸು ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಮಧ್ಯೆ ಬೊಮ್ಮಾಯಿಗೆ ಜನಪರವಾದ, ಹೊರೆ ಇಲ್ಲದ ಹಿತವಾದ ಚೊಚ್ಚಲ ಬಜೆಟ್ ಘೋಷಿಸುವ ಅನಿವಾರ್ಯತೆ ಬೊಮ್ಮಾಯಿ ಸರ್ಕಾರದ್ದಾಗಿತ್ತು.
ಬೊಮ್ಮಾಯಿ ಸರ್ಕಾರಕ್ಕೆ ರಾಜ್ಯದಲ್ಲಿ ಹುಟ್ಟಿದ ಹಿಜಾಬ್ ವಿವಾದ ದೊಡ್ಡ ತಲೆನೋವಾಗಿ ಪರಿಣಮಿಸಿತು. ಶಾಲೆಗಳಲ್ಲಿ ಹಿಜಾಬ್ ಧರಿಸಲು ಪಟ್ಟು ಹಿಡಿದ ಮುಸ್ಲಿಂ ವಿದ್ಯಾರ್ಥಿನಿಯರು, ಮತ್ತೊಂದೆಡೆ ಹಿಂದೂ ಸಂಘಟನೆ, ವಿದ್ಯಾರ್ಥಿಗಳಿಂದ ಹಿಜಾಬ್ ವಿರುದ್ಧ ಕೇಸರಿ ಶಾಲಿನ ಹೋರಾಟ. ಈ ಹಿಜಾಬ್-ಕೇಸರಿ ವಿವಾದ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.
ಹಿಜಾಬ್ ವಿವಾದದ ಬಳಿಕ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು ಹಲಾಲ್-ಜಟ್ಕಾ ಕಟ್ ವಿವಾದ. ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳು ಅಭಿಯಾನ ನಡೆಸಿದವು. ಹಲಾಲ್ ಕಟ್ ಬದಲು ಜಟ್ಕಾ ಕಟ್ ಮಾಂಸ ಖರೀದಿಸುವಂತೆ ಅಭಿಯಾನ ನಡೆಸಿದವು. ಈ ಹಲಾಲ್-ಜಟ್ಕಾ ಕಟ್ ವಿವಾದವನ್ನು ನಿಭಾಯಿಸುವಲ್ಲಿ ಬೊಮ್ಮಾಯಿ ಸರ್ಕಾರ ಸಫಲವಾಯಿತು.
ರಾಜ್ಯ ಸರ್ಕಾರಕ್ಕೆ ಎದುರಾದ ಅತಿದೊಡ್ಡ ಸವಾಲು ನಟ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ. ಅಪ್ಪು ಹೃದಯಾಘಾತದಿಂದ ನಿಧನದ ಸುದ್ದಿ ಕುಟುಂಬ, ಅಭಿಮಾನಿಗಳಿಗೆ ಮಾತ್ರವಲ್ಲ ಸರ್ಕಾರಕ್ಕೂ ಬರಸಿಡಿಲಿನಂತೆ ಎದುರಾಯಿತು.
ಪುನೀತ್ ರಾಜ್‍ಕುಮಾರ್ ನಿಧನದಿಂದಲೂ ಅದೇ ಹಿಂಸಾಚಾರ ಮರುಕಳಿಸುವ ಆತಂಕ ಎದುರಾಗಿತ್ತು. ಆದರೆ ಬೊಮ್ಮಾಯಿ ಸರ್ಕಾರ ಅಪ್ಪು ನಿಧನ, ಅಂತಿಮ ದರ್ಶನ, ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಜಾಗರೂಕತೆಯಿಂದ, ಅಚ್ಚಕಟ್ಟಾಗಿ ನಿಭಾಯಿಸುವಲ್ಲಿ ಸಫಲವಾಯಿತು