ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿರುವ ಕರ್ನಾಟಕ ನಾವೀನ್ಯತೆಯಲ್ಲಿ ದೇಶದ ಇತರೆ ಎಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ನೀತಿ ಆಯೋಗ ಬಿಡುಗಡೆ ಮಾಡಿರುವ ಮೂರನೇ ವರ್ಷದ ಭಾರತೀಯ ನಾವೀನ್ಯತಾ ಸೂಚ್ಯಂಕದಲ್ಲಿ ಮೂರನೇ ವರ್ಷವೂ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನ ಪಡೆದುಕೊಂಡು ಗಮನ ಸೆಳೆದಿದೆ.
ರಾಜ್ಯಗಳ ಮಟ್ಟದಲ್ಲಿ ಇರುವ ನಾವೀನ್ಯತಾ ಸಾಮರ್ಥ್ಯ ಹಾಗೂ ಪೂರಕ ವಾತಾವರಣವನ್ನು ಪರಿಶೀಲಿಸಿ ನೀತಿ ಆಯೋಗ ಈ ರ್ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸಿದೆ. 17 ದೊಡ್ಡ ರಾಜ್ಯಗಳು’, 10 ಈಶಾನ್ಯ, ಗುಡ್ಡಗಾಡು ರಾಜ್ಯಗಳು’ ಹಾಗೂ ‘9 ಕೇಂದ್ರಾಡಳಿತ ಪ್ರದೇಶಗಳು ಹಾಗೂ ನಗರ ರಾಜ್ಯಗಳು’ ಎಂಬ ವಿಭಾಗದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.
ಜಾಗತಿಕ ನಾವೀನ್ಯತಾ ಸೂಚ್ಯಂಕದ ರೀತಿಯೇ ಈ ಪಟ್ಟಿ ಇದ್ದು, ದೊಡ್ಡ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ 3ನೇ ವರ್ಷವೂ ಪ್ರಥಮ ಸ್ಥಾನ ಬಾಚಿಕೊಂಡಿದೆ.
ನಾವೀನ್ಯತಾ ಸೂಚ್ಯಂಕವನ್ನು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಅಯ್ಯರ್ ಸಮ್ಮುಖದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಮಣಿಪುರ, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಗಢ ಪ್ರಥಮ ಸ್ಥಾನಗಳಿಸಿವೆ.
ಕರ್ನಾಟಕ 18.01 ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದರೆ, ತೆಲಂಗಾಣ ಹಾಗೂ ಹರ್ಯಾಣ ನಂತರದ ಸ್ಥಾನದಲ್ಲಿವೆ. 10.97 ಅಂಕಗಳೊಂದಿಗೆ ಛತ್ತೀಸ್‌ಗಢ ಕೊನೆಯ ಸ್ಥಾನದಲ್ಲಿದೆ. ಈ ವಿಭಾಗದ ಸರಾಸರಿ ಅಂಕ 14.02 ಆಗಿದೆ. ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ಅತ್ಯುತ್ಕೃಷ್ಟ ಸಾಧನೆ ತೋರಿರುವುದು ಹಾಗೂ ಬೃಹತ್ ಪ್ರಮಾಣದ ವೆಂಚರ್ ಕ್ಯಾಪಿಟಲ್ ಒಪ್ಪಂದಗಳು ಆಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮೂರನೇ ವರ್ಷವೂ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.