ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೋಗ ಜಲಪಾತವು ತುಂಬಿ ಹರಿಯುತ್ತಿದೆ. ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ಭಾನುವಾರದಂದು ಜನದಟ್ಟನೆ ಹೆಚ್ಚಾಗಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಭೋರ್ಗರೆಯುತ್ತಿದೆ.
ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಕಲ್ಲು ಬಂಡೆಗಳ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕಿ ಬೀಳುವ ಜಲಪಾತದ ನಯನಮನೋಹರ ದೃಶ್ಯಾವಳಿಯನ್ನು ಪ್ರವಾಸಿಗರು ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ವೀಕ್ಷಿಸಿದರು.
ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಕೊಡಗಿನ ಅಬ್ಬಿ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದ್ದು, ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತದತ್ತ ಆಗಮಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಪಾಲ್ಸ್, ಗೊಡಚಿನಮಲ್ಕಿ ಜಲಪಾತಗಳನ್ನು ವೀಕ್ಷಿಸಲು ಸಹ ಭಾನುವಾರ ಸಾವಿರಾರು ಪ್ರವಾಸಿಗರು ದಾಂಗುಡಿಯಿಟ್ಟಿದ್ದರು.
ಆದರೆ ಪ್ರವಾಸಿಗರು ಸೆಲ್ಫಿ, ಫೋಟೋ, ವಿಡಿಯೋಗಳಿಗಾಗಿ ಅಪಾಯಕಾರಿ ಸ್ಥಳಕ್ಕೆ ತೆರಳುತ್ತಿದ್ದುದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಭಾನುವಾರ 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಕೆಲವು ಪ್ರವಾಸಿಗರು ತಮ್ಮ ಜೀವವನ್ನೂ ಲೆಕ್ಕಿಸದೆ ನದಿಯಲ್ಲಿ ಈಜಾಡಿದ್ದು, ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಮುನಿರಾಬಾದಿಗೆ ಆಗಮಿಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 4 ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಇದೇ ವೇಳೆ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ, ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಜಲಾಶಯ, ಗಗನಚುಕ್ಕಿ ಜಲಪಾತ ನೋಡಲು ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.