ಕಾಲ ಬದಲಾಗುತ್ತಿದೆ,ಭೂಮಿ ಎಷ್ಟಿದೇ ಅಷ್ಟೇ ಇದೆ, ಜನ ಹೆಚ್ಚಾಗುತ್ತಿದ್ದಾರೆ, ಭೂಮಿ ದೊಡ್ಡದು ಮಾಡಲು ಆಗಲ್ಲ, ಭೂಮಿಯನ್ನೇ ನೆಚ್ಚಿಕೊಂಡವರು ಬದುಕು ಬದಲಾಯಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಶಿಗ್ಗಾಂವಿ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಜವಳಿ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸ್ವತಂತ್ರ ಬಂದಾಗ 33 ಕೋಟಿ ಜನರಿಗೆ ಆಹಾರ ನೀಡಲು ಆಗುತ್ತಿರಲಿಲ್ಲ. ರೈತ ಉಳಿದರೆ, ದೇಶ ಉಳಿಯುತ್ತದೆ. ಅವರ ಕುಟುಂಬ ಉಳಿದರೆ ದೇಶ ಉಳಿಯುತ್ತದೆ. ರೈತರ ಕುಟುಂಬದ ಆದಾಯ ಹೆಚ್ಚಾದರೆ ಎಲ್ಲರೂ ಸುಖವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ನಾನು ಅಧಿಕಾರಕ್ಕೆ ಬಂದಾಗ ಮೊದಲ ನಿರ್ಧಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತಂದಿರುವೆ. ವಿದ್ಯೆ ಮತ್ತು ಉದ್ಯೋಗ ನೀಡುವುದು ನನ್ನ ಮೊದಲ ಗುರಿ. ಇಲ್ಲಿ ಉದ್ಯೋಗ ಸೃಷ್ಟಿಯಾದರೆ, ಆರ್ಥಿಕ ಸಬಲೀಕರಣ ಹೊಂದುತ್ತಾರೆ. ಯಾರು ಹೆಚ್ಚು ಉದ್ಯೋಗ ನೀಡುತ್ತಾರೋ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದೇವೆ. ಯಾವ ಮಹಿಳೆಯರ ದುಡ್ಡಿಗಾಗಿ ಬೇರೆಯವರು ಬಳಿ ಕೈ ಚಾಚದಂತ ಬದುಕು ನೀಡಲು ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ತಾಲೂಕಿನಲ್ಲೂ ಜವಳಿ ಪಾರ್ಕ್ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಒಟ್ಟು, ಈ ಕ್ಷೇತ್ರದಲ್ಲಿ 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಉದ್ಯಮಿಗಳಿಗೆ ರಪ್ತು ಮಾಡಲು ಹೆಚ್ಚಿನ ಅವಕಾಶಗಳು ಇವೆ. ರೈತರು ಬೆಳೆದ ಪದಾರ್ಥಗಳಿಗೆ ಸಂಸ್ಕರಣೆ ಮಾಡಿದರೆ ಹೆಚ್ಚಿನ ಲಾಭವಾಗಲಿದೆ. ಅದಕ್ಕಾಗಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು.
ಈ ವೇಳೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ ಸಿಇಓ ಮಹ್ಮದ್ ರೋಷನ್, ಸೇರಿದಂತೆ ಜವಳಿ ಇಲಾಖೆಯ ಅಧಿಕಾರಿಗಳು, ಟೆಕ್ಸ್ ಪೋರ್ಟ್ ಸಿಬ್ಬಂದಿಗಳು ಹಾಜರಿದ್ದರು.