Saturday, October 5, 2024
Saturday, October 5, 2024

ಶಿವಮೊಗ್ಗ ಜಿಲ್ಲೆ ಮಳೆ ಪರಿಸ್ಥಿತಿ: ಸೀಎಂ ಜೊತೆ ಜಿಲ್ಲಾಧಿಕಾರಿ ವಿಡಿಯೋ ಸಂವಾದ

Date:

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆದ ಹತ್ತಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನಜೀವನ ಅಸ್ತವ್ಯಸ್ತವಾಗಿದ್ದು, ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ಥ ಕುಟುಂಬಗಳಿಗೆ ತಕ್ಷಣದ ಕ್ರಮವಾಗಿ ಅಗತ್ಯ ನೆರವನ್ನು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಅವರು ರಾಜ್ಯದ ಆಯ್ದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಅತಿಹೆಚ್ಚು ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಕುರಿತು ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಭಾಗಶಃ ಅಥವಾ ಪೂರ್ಣಪ್ರಮಾಣದಲ್ಲಿ ಮನೆಯನ್ನು ಕಳೆದುಕೊಂಡವರನ್ನು ಗುರುತಿಸಿ, ತಕ್ಷಣದಲ್ಲಿ ರೂ.10,000/-ಗಳ ಸಹಾಯಧನವನ್ನು ನೀಡುವಂತೆ ಸೂಚಿಸಿದ ಅವರು, ಉಳಿದಂತೆ ಈಗಾಗಲೇ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೆ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಸರ್ಕಾರಿ ಸ್ವಾಮ್ಯದ ಶಾಲೆ, ಅಂಗನವಾಡಿ ಹಾಗೂ ಮತ್ತಿತರ ಇಲಾಖಾ ಕಟ್ಟಡಗಳು, ರಸ್ತೆ, ಸೇತುವೆ, ಜಲಾಶಯಗಳ ತುರ್ತು ದುರಸ್ತಿಗೆ ವಿಳಂಬಕ್ಕೆ ಅವಕಾಶವಿಲ್ಲದಂತೆ ಕ್ರಮ ವಹಿಸುವುದು. ಅಂತೆಯೇ ಆಗಿರಬಹುದಾದ ಬೆಳೆಹಾನಿಯ ಸಮೀಕ್ಷೆ ನಡೆಸಿ, ಖಚಿತವಾದ ವರದಿಯನ್ನು ಸಂಗ್ರಹಿಸಿ ಕಾಲಕಾಲಕ್ಕೆ ಸಲ್ಲಿಸುವಂತೆ, ಅಗತ್ಯವಿರುವಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸುವಂತೆ ಹಾಗೂ ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ತಯಾರಿಸಿ ಸಲ್ಲಿಸುವಂತೆಯೂ ಅವರು ಸೂಚಿಸಿದರು.

ಸಂವಾದದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಗಳ ಸಮಗ್ರ ಮಾಹಿತಿ ನೀಡಿ, ಜುಲೈ ಮಾಹೆಯಲ್ಲಿ ನಿಗಧಿಪಡಿಸಿದ ಕಾಲಾವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಮಳೆಯಿಂದಾಗಿ ಆಸ್ತಿ ಹಾಗೂ ಬೆಳೆಹಾನಿ ಉಂಟಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ತುಂಗಾ ಮತ್ತು ಭದ್ರಾ ಜಲಾಶಯಗಳಿಗೆ ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ಭದ್ರಾ ಜಲಾಶಯದಿಂದ ಪ್ರತಿದಿನ 45,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಈವರೆಗೆ ಸುಮಾರು 254ಮನೆಗಳು ಭಾಗಶಃ ಹಾನಿ, 97ಮನೆಗಳು ತೀವ್ರಹಾನಿ, ೩೦ಮನೆಗಳು ಪೂರ್ಣ ಪ್ರಮಾಣದ ಮನೆಗಳು ಸೇರಿದಂತೆ ಒಟ್ಟು 281ಮನೆಗಳು ಹಾನಿಗೊಳಗಾಗಿವೆ.

33ಕೊಟ್ಟಿಗೆಗಳು ನಾಶಗೊಂಡಿವೆ. ಅಲ್ಲದೇ ಎರಡು ಮಾವನ ಜೀವಹಾನಿ ಹಾಗೂ 08 ಜಾನುವಾರು ಹಾನಿಯ ಪ್ರಕರಣಗಳನ್ನು ಗುರುತಿಸಲಾಗಿದ್ದು, ಈ ಎಲ್ಲಾ ಘಟನಾವಳಿಗೆ ಸಂಬಂಧಿಸಿದಂತೆ ಅಗತ್ಯ ಪರಿಹಾರ ಕ್ರಮಗಳನ್ನು ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾಗಿದೆ ಎಂದರು.

ಭದ್ರಾವತಿ ತಾಲೂಕಿನಲ್ಲಿ 03ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 400 ಮಂದಿ ನಿರಾಶ್ರಿತರಿಗೆ ವಸತಿ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.

ಜಿಲ್ಲೆಯ ಬಹುಭಾಗಗಳಲ್ಲಿ ಭತ್ತದ ಗದ್ದೆಗಳು, ಮೆಕ್ಕೆಜೋಳ ಹಾಗೂ ಮತ್ತಿತರ ಬೆಳೆಗಳ ಜಮೀನುಗಳು ಜಲಾವೃತವಾಗಿವೆ. ಮಳೆ ಇಳಿಮುಖವಾಗುತ್ತಿದ್ದಂತೆಯೇ ಜಂಟಿ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಸಲ್ಲಿಸಲಾಗುವುದು ಎಂದ ಅವರು, 258 ಕಿ.ಮೀ. ಗ್ರಾಮೀಣ ರಸ್ತೆ ಮಳೆಯಿಂದ ಹಾನಿಗೊಳಗಾಗಿರುವುದನ್ನು ಈವರೆಗೆ ಗುರುತಿಸಲಾಗಿದೆ.

ಶಿಕಾರಿಪುರ ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳು ಒಳಗೊಂಡಂತೆ ಒಟ್ಟು 19 ಮೋರಿ, ಸೇತುವೆಗಳು ಹಾನಿಯಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

546 ವಿದ್ಯುತ್ ಕಂಬಗಳು, 102 ಶಾಲಾ ಕಟ್ಟಡಗಳು,53ಅಂಗನವಾಡಿ ಕಟ್ಟಡಗಳು, 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ. ಅಲ್ಲದೇ ಸೊರಬ ತಾಲೂಕಿನ 50 ಕೆರೆಗಳು, ಶಿಕಾರಿಪುರ ತಾಲೂಕಿನ 18 ಕೆರೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 91 ಕೆರೆಗಳು ಹಾನಿಗೊಳಗಾಗಿವೆ.

ತೀವ್ರ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ಆಗುಂಬೆ ಘಾಟಿ-ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಉಡುಪಿ-ಮಂಗಳೂರು ಮಾರ್ಗವನ್ನು ಭೂಕುಸಿತದ ಪರಿಣಾಮವಾಗಿ ವಾಹನ ಸಂಚಾರ ನಿಷೇಧಿಸಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.

ಮಳೆ ಮುಂದುವರೆದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಅಲ್ಲದೆ ತುರ್ತು ಕ್ರಮಗಳಿಗಾಗಿ ಅಗತ್ಯ ಸಿಬ್ಬಂಧಿಗಳನ್ನು ಮೇಲುಸ್ತುವಾರಿಗಾಗಿ ನಿಯೋಜಿಸಲಾಗಿದೆ ಎಂದರು.

ಪ್ರಸಕ್ತ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ರಸಗೊಬ್ಬರ ದಾಸ್ತಾನಿದ್ದು, ಎಲ್ಲಾ ರೈತರಿಗೂ ಸಕಾಲದಲ್ಲಿ ವಿತರಣೆಯಾಗುವಂತೆ ಕ್ರಮವಹಿಸಲಾಗಿದೆ. ಅಲ್ಲದೇ ಇನ್ನಷ್ಟು ರಸಗೊಬ್ಬರ ಜಿಲ್ಲೆಗೆ ಬರಲಿದ್ದು, ಒಂದೆರೆಡು ದಿನಗಳಲ್ಲಿ ರೈತರ ಅಗತ್ಯಗಳಿಗೆ ಸಕಾಲದಲ್ಲಿ ಪೂರೈಕೆಯಾಗಲಿದೆ. ಅಲ್ಲದೇ ಕೃಷಿಕರ ಅಹವಾಲುಗಳನ್ನು ಆಲಿಸಲು ಕೃಷಿ ಸಹಾಯವಾಣಿಯನ್ನು ಆರಂಭಿಸಲು ಜಂಟಿಕೃಷಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಅಗತ್ಯವಿರುವ ತಾಲೂಕುಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗಾಗಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಧರ್, ಜಂಟಿ ಕೃಷಿ ನಿದೇಶಕಿ ಶ್ರೀಮತಿ ಪೂರ್ಣಿಮಾ ಜಿ.ಸಿ., ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ|| ಶಿವಯೋಗಿ ಯಲಿ, ಚನ್ನಪ್ಪ, ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...