ಖಾಸಗಿ ಶಾಲೆಗಳಂತೆ ಇನ್ನು ಮುಂದೆ ಸರಕಾರಿ ಶಾಲೆ ಮಕ್ಕಳು ಕೂಡ ವಾಹನಗಳಲ್ಲಿ ಶಾಲೆಗೆ ಬರಲಿದ್ದಾರೆ. ಸರಕಾರಿ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರಲು ಶಾಸಕರ ಅನುದಾನದಲ್ಲಿ ವಾಹನ ಖರೀದಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಆರಂಭಿಕ ಹಂತದಲ್ಲಿ ರಾಜ್ಯದ ಸುಮಾರು 200 ಶಾಲೆಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಗ್ರಾ. ಪಂ. ಮಟ್ಟದ ಮಾದರಿ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ ವಾಹನ ಖರೀದಿ ಸುವ ಕುರಿತು ಯೋಜನೆ ರೂಪಿಸುವಂತೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖೀಕ ಇಲಾಖೆ ಆದೇಶ ಹೊರಡಿಸಿದೆ.
10ಕ್ಕಿಂತ ಕಡಿಮೆ ಮಕ್ಕಳಿರುವಲ್ಲಿ ಅವರನ್ನು ಮಾದರಿ ಶಾಲೆಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತದೆ. ಈ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮಕ್ಕಳು ಇಬ್ಬರಿಗೂ ಸರಿಯಾದ ನ್ಯಾಯ ಸಿಗುತ್ತಿಲ್ಲ. ಎಲ್ಲ ವಿಷಯ ಗಳನ್ನು ಒಬ್ಬನೇ ಶಿಕ್ಷಕ ಬೋಧನೆ ಮಾಡುವುದರಿಂದ ಹೊರೆಯಾಗುತ್ತದೆ. ಮಕ್ಕಳಿಗೂ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಸಿಗುವುದಿಲ್ಲ.
ಇಂತಹ ಶಾಲೆಗಳನ್ನು ಮಾದರಿ ಶಾಲೆಗಳಿಗೆ ವರ್ಗಾವಣೆ ಮಾಡಿಸಿ ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಮಾದರಿ ಶಾಲೆಗೆ ಕರೆತರಲು ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.