ಎಲ್ಲ ಹೆತ್ತವರೂ ಮಕ್ಕಳಿಗೆ ಬೆಣ್ಣೆ ತಿನ್ನಿಸುವುದನ್ನು ಕಲಿಸುತ್ತಾರೆ. ಇದರ ಜತೆಗೆ ಕೃಷಿ ಕಾಯಕದ ಮೂಲಕ ನಮ್ಮ ಮಣ್ಣಿನ ಗುಣವನ್ನೂ ತಿಳಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.
ಅವರು ಬಾರಕೂರು ಕೂಡ್ಲಿ ಉಡುಪರ ಮನೆ ವಠಾರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ವತಿಯಿಂದ 2022-23ನೇ ಸಾಲಿನಲ್ಲಿ ರಾಜ್ಯದ 20,000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ (ಯಂತ್ರಶ್ರೀ), ಹಡಿಲು ಭೂಮಿ ಪುನಃಶ್ಚೇತನ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರಮಿಕರಿಗೆ ಪ್ರೇರಣೆ
ಶ್ರಮಿಕರಿಗೆ ಪ್ರೋತ್ಸಾಹ, ಮಾರ್ಗದರ್ಶನ ಒದಗಿಸಬೇಕು. ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ನಾವು ಪ್ರೇರಣೆ ನೀಡುತ್ತಿದ್ದೇವೆ. ಆಸಕ್ತರಿಗೆ ಅಗತ್ಯವಿರುವ ಬೆಂಬಲವನ್ನು ಯೋಜನೆ ಮೂಲಕ ನೀಡುತ್ತಿದ್ದೇವೆ ಎಂದರು.
ಮೊದಲು ಮನೆಯಲ್ಲಿರುವ ಹತ್ತಾರು ಮಕ್ಕಳೇ ಕೃಷಿ ಕೆಲಸಕ್ಕೆ ಸಾಲುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಇರುವ ಎರಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಊರಿನಿಂದ ಹೊರಗೆ ಕಳುಹಿಸಲಾಗಿದೆ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಇದ್ದರೂ ಹಡಿಲು ಬೀಳುವ ಪರಿಸ್ಥಿತಿ ಎದುರಾಗಿದೆ ಎಂದರು.
ರೈತರಿಗೆ ಶಕ್ತಿ ನೀಡುವ ಉದ್ದೇಶದಿಂದಲೇ ಕೇಂದ್ರ ಸರಕಾರ ಇ-ಶ್ರಮ್, ಫಸಲ್ ವಿಮೆ ಮೊದಲಾದ ಯೋಜನೆಗಳನ್ನು ಅನುಷ್ಠಾನಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಸದೃಢರಾಗಬೇಕು ಎಂದರು.