ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ 120 ಪ್ಲಸ್ ಸ್ಥಾನಗಳಿಸುವ ಮೂಲಕ ಸರಳ ಬಹುಮತ ಪಡೆಯಲಿದೆ. ಬಿಜೆಪಿ 70 ಪ್ಲಸ್ ಸ್ಥಾನಗಳಿಸಿದರೆ, ಜೆಡಿಎಸ್ 25 ಪ್ಲಸ್‌ಗೆ ಸೀಮಿತವಾಗುತ್ತದೆ.
6ರಿಂದ 8 ಮಂದಿ ಪಕ್ಷೇತರರು ಗೆಲ್ಲಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ರಾಜಕೀಯ ತಂತ್ರಜ್ಞ ಸುನೀಲ್ ಕನ್ನಗೋಲು ಅವರು ಸಿದ್ಧಪಡಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿರುವ ಪ್ರಾಥಮಿಕ ಸಮೀಕ್ಷಾ ವರದಿಯ ಮುಖ್ಯಾಂಶ ಇದಾಗಿದೆ.
ಕಾಂಗ್ರೆಸ್ ಪಾಲಿಗೆ ಈ ಆಶಾದಾಯಕ ಸಮೀಕ್ಷಾ ವರದಿ ನೀಡಿರುವ ಕನ್ನಗೋಲು, ಇದಕ್ಕೆ ಕಾರಣಗಳನ್ನು ಹಾಗೂ ಕೆಲ ಎಚ್ಚರಿಕೆಗಳನ್ನು ನೀಡಿದ್ದಾರೆ ಮತ್ತು ಮುಂದಿನ ಆರು ತಿಂಗಳಿಗೆ ಸೀಮಿತವಾಗಿ ಕಾಂಗ್ರೆಸ್ ಯಾವ್ಯಾವ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂಬ ನೀಲನಕ್ಷೆಯನ್ನು ಕೂಡ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಈ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕೂಲಂಕಷ ಚರ್ಚೆ ನಡೆಸಿದ್ದು, ಕೆಲ ಸ್ಪಷ್ಟಸೂಚನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ನೆಪವಿಟ್ಟುಕೊಂಡು ಮೇಲಾಟ ನಡೆಸದಂತೆ ಸ್ಪಷ್ಟನಿರ್ದೇಶನ ನೀಡಲಾಗಿದೆ ಹಾಗೂ ಅವರ ಬಣಗಳು ಪಕ್ಷಕ್ಕೆ ಹಾನಿಯಾಗುವಂತಹ ಬಹಿರಂಗ ಹೇಳಿಕೆ ನೀಡದಂತೆ ಸ್ವಯಂ ನಿಯಂತ್ರಣ ಸಾಧಿಸಬೇಕು ಎಂದು ಸೂಚಿಸಿದ್ದಾರೆ.