Saturday, November 23, 2024
Saturday, November 23, 2024

ಯುವಜನತೆ ದುಶ್ಚಟಗಳಿಗೆ ದಾಸರಾಗದೇ ಪೋಷಕರಿಗೆ ಹೆಸರು ತರಬೇಕು- ಕವಿರಾಜ್

Date:

ಜೀವನ ತುಂಬಾ ಸುಂದರವಾಗಿದೆ. ಅದನ್ನು ಅನುಭವಿಸಲು ಉತ್ತಮ ಆರೋಗ್ಯ ಮತ್ತು ಅಭ್ಯಾಸಗಳು ಬೇಕು. ಈ ನಿಟ್ಟಿನಲ್ಲಿ ನಡೆದು ಸುಂದರ ಬದುಕನ್ನು ನಮ್ಮದಾಗಿಸಿಕೊಳ್ಳೋಣ ಎಂದು ಕನ್ನಡ ಚಲನಚಿತ್ರ ಸಾಹಿತಿ ಕವಿರಾಜ್ ಯಡೂರು ಯುವ ಸಮುದಾಯಕ್ಕೆ ಕರೆ ನೀಡಿದರು.

ಶಿವಮೊಗ್ಗ ಜಿಲ್ಲಾ ಪೊಲೀಸ್, ಕೌಶಲ್ಯಾಭಿವೃದ್ದಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಾದ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಸಮಾಜ ಒಗ್ಗೂಡಿ ಎದುರಿಸಬಹುದಾದಂತಹ ಆಪತ್ತು ಮಾದಕ ವ್ಯಸನ. ಪ್ರಸ್ತುತ ಶೇ.30 ರಷ್ಟು ಯುವಜನತೆ ಮಾದಕ ವ್ಯಸನಕ್ಕೆ ತುತ್ತಾಗಿರುವ ಅಂಕಿಅಂಶ ಆಘಾತಕಾರಿಯಾಗಿದ್ದು, ಇದನ್ನು ತಡೆಯುವುದು ಅತ್ಯವಶ್ಯ. ಚಿಕಿತ್ಸೆಗಿಂತ ರೋಗ ಬಾರದಂತೆ ತಡೆಯುವುದು ಮುಖ್ಯ ಎಂಬಂತೆ ಯುವಜನತೆ ವಿವಿಧ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗದಂತೆ ಸಮುದಾಯದಲ್ಲಿ ಜಾಗೃತಿ ಹೆಚ್ಚಬೇಕು ಎಂದು ತಿಳಿಸಿದರು.

ಮಕ್ಕಳು ಅಥವಾ ಯುವ ಜನತೆ ಮಾಡುವ ಕೆಲಸಗಳು ಅವರ ತಂದೆ ತಾಯಿ, ಕುಟುಂಬಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರನ್ನು ತಂದು ಕೊಡುತ್ತದೆ. ಮೊದಲಿಗೆ ಮಾದಕ ಚಟಗಳು ಸ್ವರ್ಗದಂತೆ ಕಂಡರೂ ಹಂತ ಹಂತವಾಗಿ ವ್ಯಸನಿಯನ್ನು ಇದು ನರಕಕ್ಕೆ ತಳ್ಳುತ್ತದೆ. ಆದ್ದರಿಂದ ಯುವಜನತೆ ಯಾವುದೇ ದುಶ್ಚಟಗಳಿಗೆ ದಾಸರಾಗದೇ, ಜವಾಬ್ದಾರಿಯುತವಾಗಿ ನಡೆದುಕೊಂಡು ಪೋಷಕರಿಗೆ ಒಳ್ಳೆಯ ಹೆಸರನ್ನು ತರಬೇಕು. ಸಂಗೀತ, ಓದು, ಜ್ಞಾನ, ಗೆಳತನದಂತಹ ಉತ್ತಮ ಚಟಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಗೆಳೆಯರಲ್ಲಿ ಯಾರಾದರೂ ಒಬ್ಬರು ಸಿಗರೇಟ್, ಕುಡಿತ ಅಥವಾ ಗಾಂಜಾ ಇತರೆ ಡ್ರಗ್ಸ್‍ಗೆ ಒಳಗಾಗುತ್ತಿದ್ದಾರೆಂಬ ಸುಳಿವು ಸಿಕ್ಕಲ್ಲಿ ಅವರ ತಂದೆ, ತಾಯಿ ಅಥವಾ ಅವರ ಪ್ರಾಥಮಿಕ ಸಂಪರ್ಕಿತರಿಗೆ ತಿಳಿಸುವ ಮೂಲಕ ಗೆಳಯನ ಜೀವನ ಉಳಿಸಲು ಸಹಾಯ ಮಾಡಬೇಕು. ಜೀವನದಲ್ಲಿ ದೊಡ್ಡದಾಗಿ ಸಾಧಿಸಿದರೆ ಮಾತ್ರ ಸಾಧನೆಯಲ್ಲ. ಉತ್ತಮ ಜೀವನ ನಿರ್ವಹಣೆ ಕೂಡ ಒಂದು ದೊಡ್ಡ ಸಾಧನೆಯಾಗಿದ್ದು ಮಕ್ಕಳು ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಬದುಕನ್ನು ಸುಂದರವಾಗಿಸಿಕೊಳ್ಳಬೇಕೆಂದರು.

ಮನೋವೈದ್ಯರಾದ ಡಾ.ಅರವಿಂದ್ ಎಸ್.ಟಿ ಮಾತನಾಡಿ, ಮಾದಕ ವ್ಯಸನ ಎಂದರೇನು, ಯಾವೆಲ್ಲ ರೀತಿಯ ಮಾದಕ ವಸ್ತುಗಳನ್ನು ವ್ಯಸನಕ್ಕೆ ಬಳಸಲಾಗುತ್ತಿದೆ, ಮಾದಕ ವಸ್ತುಗಳ ಬಳಕೆ ನಿಧಾನವಾಗಿ ಆರಂಭವಾಗಿ ನಂತರ ವ್ಯಸನವಾಗಿ ಹೇಗೆ ಪರಿವರ್ತನೆಯಾಗುತ್ತದೆ ಎಂದು ವಿವರಿಸಿದ ಅವರು ಮಾದಕ ವ್ಯಸನವನ್ನು ಒಂದೇ ಬಾರಿಗೆ ಬಿಡಿಸಲು ಬರುವುದಿಲ್ಲ. ಅದು ರೋಗಿಗೆ ಮಾರಕ ಕೂಡ. ಆದ್ದರಿಂದ ಸರಿಯಾದ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯಿಂದ ವ್ಯಸನಮುಕ್ತಗೊಳಿಸಬಹುದು. ವ್ಯಸನ ಬಿಟ್ಟ ನಂತರ ಕೂಡ ಅನುಸರಣೆ ತುಂಬಾ ಮುಖ್ಯವಾಗುತ್ತದೆ. ವ್ಯಸನಿಗಳಿಗೆ ಮಾನಸಿಕ ಚಿಕಿತ್ಸೆಯ ಅಗತ್ಯ ತುಂಬಾ ಇದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಡಿ-ಅಡಿಕ್ಷನ್ ಚಿಕಿತ್ಸೆ ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ಬಿ.ಎಂ ಮಾತನಾಡಿ, ಯುವಪೀಳಿಗೆಯನ್ನು ಅತಿ ವೇಗವಾಗಿ ಸೆಳೆಯುತ್ತಿರುವ ಸಮಸ್ಯೆಗಳಲ್ಲಿ ಮಾದಕ ವ್ಯಸನ ಪ್ರಮುಖವಾಗಿದ್ದು, ಇದರ ದುಷ್ಪರಿಣಾಮವನ್ನು ಎಲ್ಲರೂ ಅರಿಯಬೇಕೆಂದು ಒಂದು ಕಥೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಮಾದಕ ವ್ಯಸನದ ದುಷ್ಪರಿಣಾಮದಿಂದ ವಸ್ಯನಿ ಮಾತ್ರವಲ್ಲದೆ ಅವರ ತಂದೆ ತಾಯಿ, ಕುಟುಂಬ ಸೇರಿದಂತೆ ಇಡೀ ಸಮುದಾಯವೇ ನೋವು ಅನುಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು, ಯುವಜನತೆ ಇದರಿಂದ ದೂರವಿರಬೇಕು. ಗೆಳೆಯರು ಮಾದಕ ವಸ್ತುಗಳ ಬಳಕೆ ಮಾಡುವಂತೆ ಹೇಳಿದರೆ, ಒತ್ತಾಯಿಸಿದರೆ ದೃಢವಾಗಿ ಅಲ್ಲಗಳೆಯಬೇಕು. ಗೆಳೆಯರು ಕೂಡ ತಮ್ಮಲ್ಲಿ ಯಾರಾದರೊಬ್ಬರು ಮಾದಕ ವ್ಯಸನಕ್ಕೆ ತುತ್ತಾಗುವುದು ಕಂಡು ಬಂದಲ್ಲಿ ದೊಡ್ಡವರಿಗೆ ತಿಳಿಸಬೇಕು. ಯುವಜನತೆಯೇ ಸಂದೇಶಕಾರರಾಗಿ ಉತ್ತಮ ಸಂದೇಶವನ್ನು ನೀಡಬೇಕು. ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಮಾದಕ ವ್ಯಸನ ತಡೆಯುವ ನಿಟ್ಟಿನಲ್ಲಿ ಮಾದಕ ವ್ಯಸಕ ಕುರಿತು ಜಾಗೃತಿ ಮೂಡಿಸಲು 100 ಜನ ಯುವ ಸ್ವಯಂಸೇವಕರ ತಂಡ ಸಿದ್ದವಾಗಿದೆ. ಈ ತಂಡಕ್ಕೆ ಇಂದು ಚಾಲನೆ ನೀಡಲಾಗುವುದು. ಹಾಗೂ ಅವರಿಗೆ ತರಬೇತಿ ಸಹ ನೀಡಲಾಗುವುದು. ಆಸಕ್ತಿ ಇರುವ ಸ್ವಯಂ ಸೇವಕರು ಈ ತಂಡಕ್ಕೆ ಸೇರಬಹುದು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ ಗಿರೀಶ್ ಮಾತನಾಡಿ, ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರುವ ಬಗ್ಗೆ, ಸುರಕ್ಷಿತ ಮೊಬೈಲ್ ಬಳಕೆ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾದಕ ವ್ಯಸನ ತಡೆ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾದಕ ವ್ಯಸನ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜಕ ಡಾ.ನಾಗರಾಜ್ ಪರಿಸರ, ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್, ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ಅಮೃತ್ ನೋನಿ ಆಯುರ್ವೇದಿಕ್ ಔಷಧಿ ವಿತರಕ ಡಾ.ಶ್ರೀನಿವಾಸ್, ವಿದ್ಯಾರ್ಥಿಗಳು ಹಾಜರಿದ್ದರು. ಸಾಗರ ಉಪವಿಭಾಗದ ಡಿವೈಎಸ್‍ಪಿ ರೋಹನ್ ಜಗದೀಶ್ ಸ್ವಾಗತಿಸಿದರು, ಸಮನ್ವಯ ಕಾಶಿ ನಿರೂಪಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...