ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲಾ ಸರ್ವಿಸ್ ರಸ್ತೆಗಳನ್ನು ಕಳೆದ ಅಕ್ಟೋಬರ್ ನಲ್ಲೆ ಪೂರ್ಣಗೊಳಿಸಲು ಕಾಲಮಿತಿ ಇದ್ದರೂ ಪೂರ್ಣಗೊಳ್ಳದ ಕಾರಣ ಇದರಿಂದ ಅಪಘಾತಗಳು ಸಂಭವಿಸಬಹುದಾಗಿದೆ. ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲಾ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಬೆಕೆಂದು ಸಂಸದ ಡಾ. ಜಿ.ಎಂ ಸಿದ್ದೇಶ್ವರ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.
ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಸರ್ವಿಸ್‍ರಸ್ತೆಗಳು 2021ರ ಅಕ್ಟೋಬರ್‍ನಲ್ಲಿ ಮುಗಿಸಬೇಕೆಂದು ಗಡುವು ವಿಧಿಸಲಾಗಿತ್ತು. ಆದರೆ ನಾಲ್ಕು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಮ್ಮ ಅಸಮಧಾನ ವ್ಯಕ್ತ ಪಡಿಸಿದ ಸಂಸದರು ಅಧಿಕಾರಿಗಳು ಬೆಂಗಳೂರಲ್ಲಿ ಕೂತು ಎಲ್ಲದಕ್ಕೂ ಸರಿ ಅನ್ನುತ್ತೀರಾ, ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ವೀಕ್ಷಣೆ ಮಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ, ಬನಶಂಕರಿ ಬಡಾವಣೆ ಹತ್ತಿರ ಅಂಡರ್ ಪಾಸ್, ಹದಡಿ ಬ್ರಿಡ್ಜ್ ಹತ್ತಿರ ಸರ್ಕಲ್ ನಿರ್ಮಾಣವನ್ನು ಎಷ್ಟು ದಿನಗಳಲ್ಲಿ ಪೂರ್ಣಗೊಳಿಸುತ್ತೀರಿ ಎಂದು ಎನ್.ಹೆಚ್.ಎ.ಐ ಅಧಿಕಾರಿಗಳನ್ನು ಕೇಳಿದರು. ಎನ್.ಹೆಚ್.ಎ.ಐ ಅಧಿಕಾರಿ ಪ್ರತಿಕ್ರಿಯಿಸಿ ನಕ್ಷೆಯನ್ನು ಸಿದ್ಧಪಡಿಸಿ ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ತಿಳಿಸಿದರು
ದಾವಣಗೆರೆ ನಗರಕ್ಕೆ ಚಿತ್ರದುರ್ಗ ಕಡೆಯಿಂದ ಬರುವಾಗ ಮುಖ್ಯ ಪ್ರವೇಶದ್ವಾರ ನಿರ್ಮಾಣ, ತುಂಗಭದ್ರಾ ಬಡಾವಣೆ ಹತ್ತಿರ ಸರ್ವಿಸ್ ರಸ್ತೆ ನಿರ್ಮಾಣ, ಮಲ್ಲಶೆಟ್ಟಿಹಳ್ಳಿ ಬಳಿ ಪಾದಾಚಾರಿ ಕೆಳಸೇತುವೆ ನಿರ್ಮಾಣ, ಶಾಮನೂರು ಹತ್ತಿರ ಸರ್ವಿಸ್ ರಸ್ತೆ, ಲಕ್ಕಮುತ್ತೇನಹಳ್ಳಿ ಮತ್ತು ನಿರ್ಥಡಿ ಹತ್ತಿರ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಚರ್ಚಿಸಿದರು.
ನಗರದ ವಿದ್ಯಾನಗರ ಬಳಿ ಸರ್ವಿಸ್ ರಸ್ತೆಯಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್‍ಗಳು ಇದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಅವುಗಳನ್ನು ಶಿಫ್ಟ್ ಮಾಡಲು ಅಗತ್ಯ ಕ್ರಮವಹಿಸುವಂತೆ ಸಂಸದರು ಸೂಚಿಸಿದರು.
ಎನ್.ಹೆಚ್.ಎ.ಐ. ಅಧಿಕಾರಿ ಪ್ರತಿಕ್ರಿಯಿಸಿ ಸರ್ವಿಸ್ ರಸ್ತೆಯಲ್ಲಿರುವ ಹೈಟೆನ್ಷನ್ ವಿದ್ಯುತ್ ಲೈನ್ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಲಾಗುವುದೆಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೆಶ್ ಬೀಳಗಿ ಮಾತನಾಡಿ, ಮಲ್ಲಶೆಟ್ಟಿಹಳ್ಳಿ ಮತ್ತು ಕಲ್ಪನಹಳ್ಳಿ ಹತ್ತಿರ ಸರ್ವಿಸ್ ರಸ್ತೆ ಎನ್.ಹೆಚ್.ಎ.ಐ ಯುಟಿಲಿಟಿ ಕಾರಿಡಾರ್ ನಲ್ಲಿ ಪೈಪ್ ಲೈನ್‍ಗಳಲ್ಲಿ ಅಳವಡಿಸುವ ಅಗತ್ಯವಿದ್ದು ಇದಕ್ಕೆ ಎನ್.ಹೆಚ್.ಎ.ಐ. ಪ್ರಾಧಿಕಾರದವರು ಅನುಮತಿ ನೀಡಬೇಕೆಂದು ತಿಳಿಸಿದರು. ಎನ್.ಹೆಚ್.ಎ.ಐ. ಅಧಿಕಾರಿಗಳು ಈಗಾಗಲೇ ಪೈಪ್‍ಗಳನ್ನು ಆಳವಡಿಸಲಾಗಿರುತ್ತದೆ. ಆದರೆ ಯುಟಿಲಿಟಿ ಕಾರಿಡಾರ್‍ನಲ್ಲಿ ಜಾಗ ಇರುವುದಿಲ್ಲ ಎಂದು ಸಭೆಗೆ ತಿಳಿಸಿದರು,
ಎನ್.ಹೆಚ್.ಎ.ಐ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಶ್ರಿನಿವಾಸಲು ನಾಯ್ಡು ಮಾತನಾಡಿ, ಅಕ್ಟೋಬರ್‍ನಲ್ಲಿ ಕಾಮಗಾರಿಯನ್ನು ಶುರುಮಾಡಿ ನಂತರ ಒಂದು ವರ್ಷದಲ್ಲಿ ಕಾಮಗಾರಿಗಳನ್ನು ಮುಗಿಸಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.