ಕೊರೋನಾ ಸಾಂಕ್ರಾಮಿಕ ಪಿಡುಗಿನಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟ ನಿಧಾನಕ್ಕೆ ಕಡಿಮೆಯಾಗುತ್ತಿದೆ.
ರಾಜ್ಯದಲ್ಲಿ ಉದ್ಯಮ, ವಹಿವಾಟು, ತಯಾರಿ ವಲಯದ ಚಟುವಟಿಕೆಗಳು ಗರಿಗೆದರಿ, ಆರ್ಥಿಕತೆಗೆ ಉತ್ತೇಜನ ನೀಡಿದ್ದರ ಫಲ ಬೊಮ್ಮಾಯಿ ಸರ್ಕಾರ ಆಡಳಿತಕ್ಕೆ ದಕ್ಕಿದೆ.
ಬೊಕ್ಕಸಕ್ಕೆ ಆದಾಯ ಜಮೆ ದೃಷ್ಟಿಯಿಂದ ಪ್ರಸ್ತುತ ಆರ್ಥಿಕ ವರ್ಷದ ಮೊದಲ ತ್ರೖೆಮಾಸಿಕ ಆಶಾದಾಯಕವಾಗಿ ಮುಗಿದಿದೆ. ಮೊದಲ 2 ತಿಂಗಳಲ್ಲಿ 11,275 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಜೂನ್ ಕೊನೆಗೊಳ್ಳಲು ಇನ್ನೂ 4 ದಿನಗಳಿರುವ ಕಾರಣ ಲೆಕ್ಕಪತ್ರ ನಿಕ್ಕಿಯಾದ ನಂತರ ಸ್ವಂತ ಮೂಲಗಳಿಂದ ಶೇಖರಣೆಯಾದ ಆದಾಯ ಗೊತ್ತಾಗಲಿದೆ. ಎಲ್ಲ ವಲಯಗಳ ಕಾರ್ಯಚಟುವಟಿಕೆಗಳು ಮತ್ತೆ ಹಳಿಗೆ ಬಂದಿರುವ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸಾಲಕ್ಕೆ ಸರ್ಕಾರ ಈ ಬಾರಿ ಕೈಚಾಚಿಲ್ಲ. ಸದ್ಯದ ಪ್ರಗತಿ ಗಮನಿಸಿದರೆ ಮುಂದಿನ 3 ತಿಂಗಳು ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.