Wednesday, October 2, 2024
Wednesday, October 2, 2024

ಎಸ್ಸಿ.ಎಸ್ಟಿ ಸಂಬಂಧಿತ ಪ್ರಕರಣಗಳನ್ನ ಅಧಿಕಾರಿಗಳು ಪರಿಹರಿಸಬೇಕು

Date:

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.

ಜಿಲ್ಲಾ ಮಟ್ಟದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಿತಿ ಸದಸ್ಯರಾದ ಜಗದೀಶ್ ಮಾತನಾಡಿ, ಶಿವಮೊಗ್ಗ ಸುತ್ತಮುತ್ತ ಗ್ರಾಮಗಳು ಉದಾಹರಣೆಗೆ ಹಸೂಡಿಯಂತಹ ಗ್ರಾಮಗಳು ನಗರಕ್ಕೆ ಹತ್ತಿರವಿದ್ದರೂ ಜನರು ಸೌಲಭ್ಯ ವಂಚಿತರಾಗಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಸಿ, ಎಸ್‍ಟಿ, ತಮಿಳು ಇತರೆ ಹಿಂದುಳಿದ ಜನಾಂಗದವರಿದ್ದು ನಿರ್ಗತಿಕರಾಗಿದ್ದಾರೆ. ಇಂತಹ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಬೇಕೆಂದು ಕೋರಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಹಳ್ಳಿಗಳಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ನೀಡಿ, ದಿನಾಂಕ ನಿಗದಿಪಡಿಸಿ ಅರ್ಧ ದಿನ ಬಂದು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದ ಮರಳು ಕ್ವಾರೆಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುವುದನ್ನು ತಡೆಯುವಂತೆ ಸದಸ್ಯ ಜಗದೀಶ್ ಕೋರಿದರು. ಜಿಲ್ಲಾಧಿಕಾರಿಗಳು ಭೂವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪ್ರತಿ ತಿಂಗಳು ಮರಳು ಬಳಕೆ ಮಾಡಿದ ಇಲಾಖೆಗಳಿಂದ ವರದಿ ಪಡೆದು ನೀಡುವಂತೆ ಹಾಗು ಸಿಸಿ ಟಿವಿ ಫೂಟೆಜ್ ನೀಡುವಂತೆ ಸೂಚಿಸಿದರು. ಒಂದು ವೇಳೆ ನೀಡದಿದ್ದರೆ ಅವರ ವಿರುದ್ದ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.

ಶಿಕಾರಿಪುರ ತಾಲ್ಲೂಕಿನ ಉಡುಗಣಿ ಗ್ರಾಮದ ಸರ್ವೇ ನಂ 43 ಬ್ಲಾಕ್ ಫಲಾನುಭವಿಯೋರ್ವರ 5 ವರ್ಷದ 20 ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆಯವರು ಸರ್ವೇ ಕಾರ್ಯ ಮಾಡಿ ಕಡಿದು ಹಾಕಿದ್ದು, ಇವರಿಗೆ ಸೂಕ್ತ ಪರಿಹಾರ ನೀಡುವಂತೆ ಅವರು ಕೋರಿದರು. ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯವರು ಫಲಾನುಭವಿಯನ್ನು ಕರೆಯಿಸಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.

ಕಟ್ಟಡ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭೋವಿ ಜನಾಂಗದವರಿಗೆ ಕಾರ್ಮಿಕ ಕಾರ್ಡ್ ಹಾಗೂ ಇತರೆ ಸೌಲಭ್ಯಗಳು ಕಾರ್ಮಿಕ ಇಲಾಖೆಯಿಂದ ಸಿಗುತ್ತಿಲ್ಲ. ಸಂತೇಕಡೂರು, ಸೋಗಾನೆ, ಮತ್ತೂರು ಪ್ರದೇಶದಲ್ಲಿ ಬಲಿಷ್ಟ ವ್ಯಕ್ತಿಗಳು ಸರ್ಕಾರಿ ಭೂಮಿ ಖರೀದಿಸಿ, ಮಾರಾಟ ಮಾಡುವ ಮಾಫಿಯಾ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು, ಮೊರಾರ್ಜಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟವಿಲ್ಲವಾಗಿದ್ದು, ಉತ್ತಮ ಶಿಕ್ಷಕರನ್ನು ನೇಮಿಸಬೇಕು, ಶಾಸಗಿ ಶಾಲೆಗಳಲ್ಲಿ ಫೀ ಹಾವಳಿ ತಪ್ಪಿಸುವಂತೆ ಮತ್ತು ಕೆಲವು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿವೇತನ ಸೌಲಭ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಿಲ್ಲ ಈ ಬಗ್ಗೆ ಕ್ರಮ ವಹಿಸುವಂತೆ ಹಾಗೂ ಅಬ್ಬಲಗೆರೆ ಗ್ರಾಮದ ಒಂದು ಎಕರೆ ಸರ್ಕಾರಿ ಜಾಗದಲ್ಲಿ ಲೇಔಟ್ ನಿರ್ಮಾಣವಾಗುತ್ತಿದ್ದು ಇದನ್ನು ತೆರವುಗೊಳಿಸುವಂತೆ ಕೋರಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಒಂದು ಶಿಬಿರ ಏರ್ಪಡಿಸಿ ಅರ್ಹರಿಗೆ ಕಾರ್ಡ್ ನೀಡುವಂತೆ ಸೂಚಿಸಿದರು. ಹಾಗೂ ಭೂಮಿ ಖರೀದಿ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.

ಸಮಿತಿ ಸದಸ್ಯರಾದ ನಾಗರಾಜ ಮಾತನಾಡಿ, ವಿದ್ಯಾನಗರದ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಪ್ರಭಾವಿ ವ್ಯಕ್ತಿ ಕಬಳಿಸುವ ಯತ್ನ ಮಾಡುತ್ತಿದ್ದು, ಶಾಲಾ ಎಸ್‍ಡಿಎಂಸಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಪಾಲಿಕೆ ಆಯುಕ್ತರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಸದರಿಯವರ ಹೆಸರಿನಲ್ಲಿರುವ ಖಾತೆಯನ್ನು ರದ್ದುಪಡಿಸಿ ಶಾಲೆಗೆ ನ್ಯಾಯ ಒದಗಿಸಿಕೊಡಬೇಕು. ಹಾರ್ನಹಳ್ಳಿ ಹಾಗೂ ಇತರೆಡೆ ಪರವಾನಗಿ ಇಲ್ಲದೇ ಬಾರ್ ಮತ್ತು ವೈನ್ ಶಾಪ್‍ಗಳನ್ನು ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದು ಇವುಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೋರಿದರು.

ಸಮಿತಿ ಸದಸ್ಯರಾದ ರಾಜಕುಮಾರ್ ಮಾತನಾಡಿ, ಪೊಲೀಸ್ ಕ್ವಾಟ್ರಸ್ ಹಿಂಭಾಗ ಶೋಷಿತ ಸಮುದಾಯದ ಅಭಿವೃದ್ದಿಗಾಗಿ ಮೀಸಲಾಗಿದ್ದ ಜಾಗವನ್ನು ನೀಡುವಂತೆ ಕೋರಿದರು. ರಾಮಿನಕೊಪ್ಪದಲ್ಲಿ ಬಡವರಿಂದ ಮೇಲ್ವರ್ಗದವರಿಗೆ ಭೂಮಿಯನ್ನು ಬಿಡಿಸಿಕೊಡಲಾಗುತ್ತಿದ್ದು ಈ ಬಗ್ಗೆ ಕ್ರಮ ವಹಿಸಬೇಕು. ಹಾಗೂ ವಿದ್ಯಾನಗರದ ದಲಿತ ಹುಡುಗನ ಮೇಲಿನ ದೌರ್ಜನ್ಯ ಪ್ರಕರಣ ಇತ್ಯರ್ಥಪಡಿಸುವುದು ಮತ್ತು ವಿನಯ್ ಎಂಬಾತನ ದೌರ್ಜನ್ಯ ಪ್ರಕರಣ ದಾಖಲಾಗಿ ಒಂದು ವರ್ಷ ಕಳೆದರೂ ಪರಿಹಾರ ದೊರೆತಿಲ್ಲ. ಹಾಗೂ ಸೊರಬ ತಾಲ್ಲೂಕಿನ ಚೌಟಿ ಗ್ರಾಮದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದ್ದು ಹಾಳಾಗಿದೆ. ಈ ಬಗ್ಗೆ ವಿಚಾರಣೆ ನಡೆಸಬೇಕೆಂದರು.

ಸಮಿತಿ ಸದಸ್ಯರಾದ ಬಸವರಾಜ ಹಸ್ವಿ ಮಾತನಾಡಿ, ಸೊರಬ ತಾಲ್ಲೂಕಿನ ಗ್ರಾಮವೊಂದರಲ್ಲೇ 16 ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಕೂಡಲೇ ಕ್ರಮ ವಹಿಸಬೇಕು ಹಾಗೂ ಇನ್ನೊಂದು ಗ್ರಾಮದಲ್ಲಿ ಭೂ ಮಾಲೀಕ ಗೇಣಿದಾರನನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಸಮಿತಿ ಸದಸ್ಯರಾದ ಏಳುಕೋಟಿ ಮಾತನಾಡಿ, ಹೊಳೆಹೊನ್ನೂರು ಠಾಣೆಯಲ್ಲಿ ದಾಖಲಾದ ಅಟ್ರಾಸಿಟಿ ಪ್ರಕರಣ ಬಗ್ಗೆ ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿರುವವರ ಮೇಲೆ ಶೀಘ್ರವಾಗಿ ಕ್ರಮ ವಹಿಸಬೇಕು ಎಂದರು.

ಸಮಿತಿ ಸದಸ್ಯರಾದ ರಾಮಚಂದ್ರಪ್ಪ ಮಾತನಾಡಿ, ಮೆಡಿಕಲ್ ಶಾಪ್‍ಗಳಲ್ಲಿ ಡ್ರಗ್ಸ್ ಮಾರಾಟದ ವಿರುದ್ದ ಕ್ರಮ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತಾಂಡ/ಭೋವಿ ಕಾಲೋನಿ ಹಟ್ಟಿ ಇತರೆ ಮನೆಗಳಲ್ಲಿ ಮದ್ಯ ಮಾರಾಟ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು.

ಜಿಲ್ಲಾಧಿಕಾರಿಗಳು, ಅಕ್ರಮ ಮದ್ಯ ಮಾರುವವರ ವಿರುದ್ದ ಪ್ರಕರಣ ದಾಖಲಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಸ್ಮಶಾನ ಭೂಮಿ ಮಂಜೂರಾತಿ, ಕೋವಿಡ್ ಪರಿಹಾರ, ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿ, ಪರಿಹಾರ ಸೇರಿದಂತೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.

2022 ನೇ ಸಾಲಿನಲ್ಲಿ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಒಟ್ಟು 41 ಪ್ರಕರಣ ದಾಖಲಾಗಿದ್ದು, 27 ಪ್ರಕರಣಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ. 06 ಪ್ರಕರಣ ಬಾಕಿ ಇದ್ದು, ಸುಳ್ಳು ಜಾತಿ 08 ಪ್ರಕರಣಗಳಾಗಿವೆ. ಒಟ್ಟು ರೂ. 82 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್ ಬಿ.ಎಂ, ಜಿಲ್ಲಾ ಪಂಚಾಯಿತಿ ಸಿಇಓ ಎಂ.ಎಲ್.ವೈಶಾಲಿ, ಸಾಗರ ಉಪವಿಭಾಗದ ತಹಶೀಲ್ದಾರ್ ನಾಗರಾಜ್, ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್, ಅರಣ್ಯ ಇಲಾಖೆ, ಅಬಕಾರಿ, ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...