ಮಳೆ ಮಾರುತಗಳು ಬಂದಿವೆ ಎಂಬ ಹವಾಮಾನ ಇಲಾಖೆ ವರದಿಗಳ ಹೊರತಾಗಿಯೂ ಕಳೆದ ಮೂರ‍್ನಾಲ್ಕು ದಿನಗಳಿಂದ ಮಳೆ ಸಂಪೂರ್ಣವಾಗಿ ಸಾಗರ ತಾಲೂಕಿನಲ್ಲಿ ಮಾಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಇಳಿಮುಖವಾಗಿದೆ ಎಂದು ತಿಳಿದುಬಂದಿದೆ.
ಜಲಾಶಯದ ನೀರಿನ ಮಟ್ಟ 1751.25 ಅಡಿಗೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ಒಳಹರಿವು ಪ್ರಮಾಣ ಸಂಪೂರ್ಣ ನಿಂತಿದೆ. 4124 ಕ್ಯುಸೆಕ್ಸ್ ನೀರಿನ ಹೊರ ಹರಿವು ಇದೆ. ಹೀಗಾಗಿ ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಸಂಭವ ಇದೆ.
ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದ ಜಲ ವಿದ್ಯುದಾಗಾರಗಳಾದ ಶರಾವತಿ, ಮಹಾತ್ಮಾಗಾಂಧಿ, ಲಿಂಗನಮಕ್ಕಿ, ಅಂಬುತೀರ್ಥ ಮತ್ತು ಶರಾವತಿ ಟೇಲ್ ರೇಸ್ ಯೋಜನೆಗೆ ನೀರು ಪೂರೈಸುವ ಕೆಲಸವನ್ನು ಲಿಂಗನಮಕ್ಕಿ ಜಲಾಶಯ ಮಾಡುತ್ತಾ ಬಂದಿದೆ. 156 ಟಿಎಂಸಿ ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 47ಕ್ಕೂ ಕಡಿಮೆ ಟಿಎಂಸಿ ಅಡಿ ನೀರು ಮಾತ್ರ ಇದೆ.
ಜಲಾನಯನದ ಪ್ರದೇಶಗಳಾದ ಅಂಬುತೀರ್ಥ, ಹೊಸನಗರ, ತುಮರಿ, ಬ್ಯಾಕೋಡು, ಹೊಳೆಬಾಗಿಲು, ಸಾವೇಹಕ್ಲು ಪ್ರದೇಶಗಳಲ್ಲಿ ಉತ್ತಮ ಮಳೆ ಆದಲ್ಲಿ ಜಲಾಶಯಕ್ಕೆ ಒಳಹರಿವು ಆರಂಭವಾಗುತ್ತದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದರು.