ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ಅಲೆ ಸೃಷ್ಟಿಯಾಗುತ್ತಿದೆಯಾ ಎಂಬ ಆತಂಕ ಹುಟ್ಟಿಕೊಳ್ಳುತ್ತಿದೆ. ಮೂರು ತಿಂಗಳ ನಂತರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಶೇ.41ರಷ್ಟು ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 5,233 ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ಪತ್ತೆಯಾಗಿದೆ.
ಇದೇ ಅವಧಿಯಲ್ಲಿ 7ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 3,345 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 43,190,282ಕ್ಕೆ ಹೆಚ್ಚಾಗಿದೆ. ಇದರ ಹೊರತಾಗಿ, ಇದುವರೆಗೂ 42,636,710 ಸೋಂಕಿತರು ಗುಣಮುಖರಾಗಿದ್ದಾರೆ. 524,715 ಮಂದಿ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 28,857ಕ್ಕೆ ಏರಿಕೆಯಾಗಿದೆ.