ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ 155 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಲೆಕ್ಕ ಹಾಕಿ ನೋಡಿದರೆ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೆ 1.75 ಲಕ್ಷ ರೂಪಾಯಿ ಸಾಲ ಹೇರಿದ್ದಾರೆ. ಇಂಥವರಿಂದ ದೇಶ ಉಳಿಯುತ್ತದೆಯೇ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ, ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ದೇಶದ ಸಾಲ 53.11 ಲಕ್ಷ ಕೋಟಿ ರೂಪಾಯಿ ಮಾತ್ರ ಇತ್ತು. ಆದರೆ, ಬಿಜೆಪಿ ಸರ್ಕಾರ ಬಂದ 8 ವರ್ಷಗಳಲ್ಲಿ 3 ಪಟ್ಟು ಸಾಲ ಮಾಡಿದ್ದಾರೆ. ಈ ಸಾಲವನ್ನು ಮೋದಿ ತೀರಿಸುತ್ತಾರಾ? ದೇಶದ ಜನರೇ ಈ ಭಾರ ಹೊತ್ತುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಿಂದ ಒಟ್ಟು 19 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂದಾಯ ಮಾಡಲಾಗಿದೆ. ಆದರೆ, ರಾಜ್ಯಕ್ಕೆ ಮರಳಿ ಸಿಕ್ಕ ತೆರಿಗೆ ಪಾಲು ಕೇವಲ 1.29 ಲಕ್ಷ ಕೋಟಿ. ರೂಪಾಯಿ ಇನ್ನೂ 18.71 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರವೇ ಇಟ್ಟುಕೊಂಡಿದೆ. ಇದೆಲ್ಲ ಯಾರು ದುಡ್ಡು? ರಾಜ್ಯದ ಜನ ದುಡಿದು ಕೊಟ್ಟ ದುಡ್ಡು. ಇಂಥವರಿಗೆ ಮತ್ತೆ ಮತ ಕೊಡಬೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
2014ರಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್‌ಗೆ 118 ಡಾಲರ್ ಇತ್ತು. ಈಗ 113 ಡಾಲರ್‌ಗೆ ಇಳಿದಿದೆ. ಆದರೆ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಮಾತ್ರ ಗಗನಕ್ಕೇರುತ್ತಿದೆ. ಕಾರಣ ಕೇಳಿದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ದುಬಾರಿಯಾಗಿದೆ ಎಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರು, ಪದವೀಧರರು ಮತದಾರರು. ಮುಂದಿನ ಸಾರ್ವತ್ರಿಕ ಚುನಾವಣೆಗೆ ಇದು ದಿಕ್ಸೂಚಿ ಆಗಿದೆ. ಪ್ರಜ್ಞಾವಂತರಾದ ನೀವು ಯೋಚಿಸಿ ಮತ ಹಾಕಿ ಎಂದು ಅವರು ಮನವಿ ಮಾಡಿದ್ದಾರೆ.