ಜಿ-20 ರಾಷ್ಟ್ರಗಳ ಪೈಕಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ. ಜೊತೆಗೆ ಜಗತ್ತು ಈಗ ಎದುರು ನೋಡುತ್ತಿರುವ ಅತ್ಯುತ್ತಮ ಮತ್ತು ನಂಬಿಕಸ್ತ ಪಾಲುದಾರನಾಗಲು ಭಾರತಕ್ಕೆ ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಿನ್ನೆ ಶುಕ್ರವಾರ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.
ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ 80 ಸಾವಿರ ಕೋಟಿ ರೂ. ವೆಚ್ಚದ 1,406 ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಅವುಗಳ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಕೃಷಿ, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್, ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆ ಕ್ಷೇತ್ರ, ಉತ್ಪಾದನೆ, ನವೀಕೃತ ಇಂಧನ, ಔಷಧೋದ್ಯಮ, ಪ್ರವಾಸೋದ್ಯಮ, ರಕ್ಷಣೆ ಹಾಗೂ ವಾಯುಯಾನ, ಜವುಳಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳು ಉದ್ಘಾಟನೆಗೊಂಡ ಯೋಜನೆಗಳಲ್ಲಿ ಸೇರಿವೆ.
ಜಗತ್ತಿನಲ್ಲಿ ಸದ್ಯ ಉಂಟಾಗಿರುವ ಬೆಳವಣಿಗೆಗಳು ನಮ್ಮ ದೇಶಕ್ಕೆ ಪ್ರಧಾನ ಭೂಮಿಕೆ ನಿರ್ವಹಿಸುವ ಅವಕಾಶ ತಂದುಕೊಟ್ಟಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಸತ್ತಾತ್ಮಕವಾಗಿರುವ ನಮ್ಮ ಭಾರತಕ್ಕೆ ಮಾತ್ರ ಸದ್ಯ ಜಗತ್ತು ಎದುರು ನೋಡುತ್ತಿರುವ ನಂಬಿಕಸ್ತ ಪಾಲುದಾರ ನಾಗಲು ಸಾಧ್ಯ. ಏಕೆಂದರೆ ನಮಗೆ ಆ ರೀತಿಯ ಸಾಮರ್ಥ್ಯ ಮತ್ತು ಶಕ್ತಿ ಇದೆ ಎಂದು ಹೇಳಿದ್ದಾರೆ.