ರೈಲ್ವೆ ಗೇಟ್ ದಾಟುವಾಗ ಅವಸರ ಮಾಡಿಕೊಂಡು ಅಪಘಾತಗಳಿಗೆ ಅವಕಾಶ ನೀಡಬಾರದು. ನಿಧಾನವಾಗಿ ಲೆವೆಲ್ ಕ್ರಾಸಿಂಗ್ ಮಾಡಿ, ಎರಡು ನಿಮಿಷ ತಡವಾದರೂ ಪರವಾಗಿಲ್ಲ ಹೆಚ್ಚಿನ ಸುರಕ್ಷತೆ ವಹಿಸುವ ಮೂಲಕ ನಿಮ್ಮ ಅಮೂಲ್ಯ ಜೀವನ ಮತ್ತು ರೈಲ್ವೆ ಇಲಾಖೆ ಆಸ್ತಿಯನ್ನು ರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೀರಜ್ ಭಾಫ್ನಾ ತಿಳಿಸಿದರು.
ನೈರುತ್ಯ ರೈಲ್ವೆ ಮೈಸೂರು ವಿಭಾಗ ವತಿಯಿಂದ ಜೂನ್ 9 ರಂದು ಇರುವ ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತ ದಿನದ ಅಂಗವಾಗಿ ಇಂದು ಶಿವಮೊಗ್ಗ ನಗರದ ಹೊಳೆ ಬಸ್ ಸ್ಟಾಪ್ ಹತ್ತಿರವಿರುವ ರೈಲ್ವೆ ಗೇಟ್ ನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಜಾಗೃತಿ ಅಭಿಯಾನವು ಇಂದಿನಿಂದ ಜೂನ್ 9 ರವರೆಗೆ ಒಂದು ವಾರ ಕಾಲ ನಡೆಯಲಿದ್ದು, ಸಾರ್ವಜನಿಕರು ರೈಲ್ವೆ ಗೇಟ್ ಬಳಿ ಗೇಟ್ ಮ್ಯಾನ್ ಇಲ್ಲದಿದ್ದರೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಬೇಕೆಂದರು.
ಆರ್‍ಪಿಎಫ್ ನಿರೀಕ್ಷಕ ಬಿ.ಎನ್ ಕುಬೇರಪ್ಪ ಮಾತನಾಡಿ, ರೈಲ್ವೇಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ರೈಲ್ವೆ ಕಾಯ್ದೆ 160 ರ ಪ್ರಕಾರ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಬೈಕ್, ಸೈಕಲ್ ಮತ್ತು ಇತರೆ ವಾಹನ ಸವಾರರು ಲೆವೆಲ್ ಕ್ರಾಸಿಂಗ್ ಮಾಡುವಾಗ ಹೆಚ್ಚಿನ ಜಾಗೃತಿ ವಹಿಸಿ, ರೈಲ್ವೆ ಇಲಾಖೆಯ ಕಾನೂನುಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು
ಆರ್.ಟಿಓ ಅಧಿಕಾರಿ ಡಿ ಮೋಹನ್ ಕುಮಾರ್ ಮಾತನಾಡಿ, ತಮ್ಮ ರಕ್ಷಣೆ ಬಗ್ಗೆ ಅರಿವು ಮತ್ತು ಜಾಗರೂಕತೆಯಿಂದ ವರ್ತಿಸಿದಾಗ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವೆಂದು ಹೇಳಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಜಿ. ಆರ್. ಪಿ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಜಾನ್ ಕುರಿಯಕೋಸ್ , ಡಿ ಎಂ ಇ,(ಪವರ್) ಅಧಿಕಾರಿ ರೋನಕ್ ಪ್ರತೀಕ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.