ಭಾರತದಲ್ಲಿ ಧಾರ್ಮಿಕ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಕುರಿತಾಗಿ ಅಮೆರಿಕ ಮತ್ತೊಮ್ಮೆ ತನ್ನ ಮಾತುಗಳನ್ನು ಹರಿಬಿಟ್ಟಿದೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಭಾರತದ ಕುರಿತಾಗಿ ಮತ್ತೊಮ್ಮೆ ದೊಡ್ಡ ಹೇಳಿಕೆ ನೀಡಿದ್ದು, ಭಾರತದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಅಲ್ಪ ಸಂಖ್ಯಾತರ ಮೇಲಿನ ದಾಳಿ ನಿರಂತರವಾಗಿ ಏರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ವಿಶ್ವದ ಮೂಲೆ ಮೂಲೆಯಲ್ಲಿಯೂ ಧಾರ್ಮಿಕ ಸ್ವಾಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸುವ ಪ್ರಯತ್ನಕ್ಕೆ ಅಮೆರಿಕ ಸದಾ ಬೆಂಬಲ ನೀಡುತ್ತದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಾರ್ಷಿಕ ವರದಿಯನ್ನು ಮಂಡಿಸುವಾಗ ಆಂಟೋನಿ ಬ್ಲಿಂಕೆನ್ ಈ ಮಾತು ಹೇಳಿದ್ದಾರೆ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾದ ಬಗ್ಗೆಯೂ ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬ್ಲಿಂಕೆನ್ ಉದಾಹರಣೆಯಾಗಿ ಭಾರತದ ವಿಚಾರವನ್ನು ತೆಗೆದುಕೊಂಡಿದ್ದರು.
ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಅನೇಕ ಧರ್ಮಗಳ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಜನರು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ. ವಿಯೆಟ್ನಾಂನಲ್ಲಿನ ಅಧಿಕಾರಿಗಳು ನೋಂದಾಯಿಸದ ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ನೈಜೀರಿಯಾದಲ್ಲಿ, ಕೆಲವು ರಾಜ್ಯಗಳ ಸರ್ಕಾರಗಳು ಅವರ ನಂಬಿಕೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಮಾನನಷ್ಟ ಮತ್ತು ಧರ್ಮನಿಂದೆಯ ಕಾನೂನುಗಳ ಅಡಿಯಲ್ಲಿ ಅವರನ್ನು ಶಿಕ್ಷಿಸುತ್ತವೆ.
ಚೀನಾವನ್ನು ಉಲ್ಲೇಖಿಸಿ ಮಾತನಾಡಿದ ಆಂಟೋನಿ ಬ್ಲಿಂಕೆನ್ ಅವರು ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಟಾವೊ ಸಮುದಾಯಗಳ ಜನರ ಧಾರ್ಮಿಕ ಸ್ಥಳಗಳನ್ನು ಚೀನಾದಲ್ಲಿ ನಾಶಪಡಿಸಲಾಗಿದೆ ಎಂದು ಹೇಳಿದರು.
ಟಿಬೆಟಿಯನ್ ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ ಇತ್ಯಾದಿ ಜನರಿಗೆ ಅಲ್ಲಿ ಮನೆ ಮತ್ತು ಉದ್ಯೋಗ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಲ್ಲಿಗೆ ಬಂದ ನಂತರ ಅಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊನೆಗೊಂಡಿದೆ ಎಂದು ಬ್ಲಿಂಕನ್ ಹೇಳಿದರು.
ಹೆಣ್ಣುಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅವರ ಮೇಲಿನ ನಿರ್ಬಂಧಗಳ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಂಟೋನಿ ಬ್ಲಿಂಕನ್ ಅವರು 2021 ರಲ್ಲಿ ಧರ್ಮನಿಂದೆಯ ಆರೋಪದ ಮೇಲೆ 16 ಜನರಿಗೆ ಮರಣದಂಡನೆ ವಿಧಿಸಲಾಯಿತು ಎಂದು ಹೇಳಿದ್ದಾರೆ.