ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಿತ್ಯವೂ ಈಗ ಹತ್ಯೆಗಳು ಸಂಭವಿಸುತ್ತಿವೆ.
ಉಗ್ರಗಾಮಿಗಳು ಉದ್ದೇಶಿತ ಹತ್ಯೆ ನಿರಂತರವಾಗಿ ನಡೆಸುತ್ತಿದ್ದಾರೆ. ಸರಕಾರಿ ನೌಕರರು, ಮುಸ್ಲಿಮೇತರರನ್ನೇ ಉಗ್ರರು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ.
ಇದು ಸರಕಾರಿ ನೌಕರರು ಮತ್ತು ಮುಸ್ಲಿಮೇತರರನ್ನು ಭಯಭೀತಗೊಳಿಸಿದೆ. ನಿನ್ನೆ ಗುರುವಾರ ನೂರಾರು ಮಂದಿ ಸರಕಾರಿ ನೌಕರರು ತಂತಮ್ಮ ಊರುಗಳಿಗೆ ವರ್ಗಾವಣೆ ಮಾಡುವಂತೆ ಪ್ರತಿಭಟನೆ ಮಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ ಜಿಲ್ಲಾ ನೌಕರರ ವರ್ಗಾವಣೆ ನೀತಿ ಇದೆ. ಅಂದರೆ, ಒಂದು ಜಿಲ್ಲೆಯ ನೌಕರರನ್ನು ಬೇರೊಂದು ಜಿಲ್ಲೆಗೆ ನಿಯೋಜಿಲಾಗುತ್ತದೆ. ಕಾಶ್ಮೀರ ಪ್ರದೇಶದ ಜಿಲ್ಲೆಗಳಿಗೆ ಜಮ್ಮು ಪ್ರದೇಶದ ನೌಕರರನ್ನು ನಿಯೋಜಿಸಲಾಗುತ್ತಿದೆ.
ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣಕ್ಕೆ ಅನುಕೂಲವಾಗಬಹುದು ಎಂಬುದು ಉದ್ದೇಶ. ಆದರೆ, ಸರಕಾರದ ಎಣಿಕೆ ತಿರುವುಮುರುವು ಆಗಿರುವುದು ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹತ್ಯಾಕಾಂಡ ಸಾಕ್ಷಿಯಾಗಿದೆ.
ಕಾಶ್ಮೀರದಲ್ಲಿ ಗುಂಡಿಕ್ಕಿ ಬ್ಯಾಂಕ್ ಮ್ಯಾನೇಜರ್ ಹತ್ಯೆ
‘ಜಮ್ಮು ಮೂಲದ ಮೀಸಲು ವರ್ಗಗಳ ನೌಕರರ ಸಂಘ’ ಅಡಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ನೌಕರರು, ತಮಗೆ ಸರಕಾರ ಸುರಕ್ಷಿತ ವಾತಾವರಣ ಕಲ್ಪಿಸಲು ಮತ್ತು ಉಗ್ರರ ದಾಳಿಗಳನ್ನು ನಿಲ್ಲಿಸಲು ವಿಫಲವಾಗಿದೆ. ತಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಜಮ್ಮುವಿನ ಪ್ರೆಸ್ ಕ್ಲಬ್‌ನಿಂದ ಆರಂಭಗೊಂಡು ಅಂಬೇಡ್ಕರ್ ಚೌಕ್‌ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿತು.
“ಅಂತರ್-ಜಿಲ್ಲಾ ವರ್ಗಾವಣೆ ನೀತಿ ಅಡಿಯಲ್ಲಿ ಜಮ್ಮುವಿನ ವಿವಿಧ ಜಿಲ್ಲೆಗಳಿಂದ ೮೦೦೦ ನೌಕರರು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಿನ ವಾತಾವರಣದಲ್ಲಿ ನಾವು ಕಾಶ್ಮೀರಕ್ಕೆ ಹೋಗಿ ಕೆಲಸ ಮಾಡುವುದಿಲ್ಲ.. ಅಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆಯಾದರೂ ಈಗ ಉದ್ದೇಶಿತ ಹತ್ಯೆಗಳು ಹೆಚ್ಚುತ್ತಿರುವುದರಿಂದ ಅಸುರಕ್ಷಿತ ಭಾವನೆ ಮೂಡಿದೆ ಎಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶಿಕ್ಷಕರಾಗಿರುವ ರಮೇಶ್ ಚಂದ್ ಹೇಳುತ್ತಾರೆ.
ಕಾಶ್ಮೀರದಲ್ಲಿ ಮೇ 31ರಂದು ಶಿಕ್ಷಕಿಯೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದರು. ಇವರಿಗೆ ಸಂತಾಪ ಸೂಚಿಸಲೂ ಪ್ರತಿಭಟನಾಕಾರರು ಜಮ್ಮುವಿನಲ್ಲಿ ನಿನ್ನೆ ಸೇರಿದ್ದರು.
ಶ್ರೀನಗರದಲ್ಲಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ
“ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯಿಂದ ಹತಾಶರಾಗಿದ್ದೇವೆ. ಹಿಂದು, ಸಿಖ್, ಮುಸ್ಲಿಮರು ಯಾರೂ ಕೂಡ ಇಲ್ಲಿ ಸುರಕ್ಷಿತವಲ್ಲ. ಉಗ್ರರು ಯಾರನ್ನು ಬೇಕಾದರೂ ಗುರಿಯಾಗಿಸುತ್ತಾರೆ” ಎಂದು ಪ್ರತಿಭಟನಾಕಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.