Monday, December 15, 2025
Monday, December 15, 2025

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು- ಈಶ್ವರಪ್ಪ

Date:

ಮಕ್ಕಳಿಗೆ ಶಿಕ್ಷಣ ಅತಿ ಮುಖ್ಯವಾಗಿದ್ದು ಸರ್ಕಾರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೆ ಅಧಿಕಾರಿ/ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸಬೇಕೆಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಎನ್‍ಟಿ ರಸ್ತೆ ಬಳಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಶಾಸಕರು ಸಂವಾದ ನಡೆಸಿದಾಗ, ವಿದ್ಯಾರ್ಥಿ ಮುರಳೀಧರ್ ಮಾತನಾಡಿ, ಹಾಸ್ಟೆಲ್ ಶುಚಿತ್ವ, ನಿರ್ವಹಣೆ ಆಹಾರದ ರುಚಿ ಉತ್ತಮಗೊಳ್ಳಬೇಕು ಎಂದರು.

ವಿದ್ಯಾರ್ಥಿ ಪುನೀತ್ ಮಾತನಾಡಿ, ಶುದ್ದ ಕುಡಿಯುವ ನೀರು ಮತ್ತು ಕಸ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಇನ್ನೋರ್ವ ವಿದ್ಯಾರ್ಥಿ ಉನ್ನತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಹಾಸ್ಟೆಲ್ ವ್ಯವಸ್ಥೆ ಗಮನಿಸಬೇಕು ಹಾಗೂ ಹಾಸ್ಟೆಲ್ ಗ್ರಂಥಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಅನುಕೂಲಕರವಾದ ಪುಸ್ತಕಗಳಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಶಾಸಕರು ಪ್ರತಿಕ್ರಿಯಿಸಿ, ಅಧಿಕಾರಿ/ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಉತ್ತಮ ಊಟ ನೀಡಲು ಅವಶ್ಯಕವಾದ ಕ್ರಮಗಳನ್ನು ವಹಿಸಬೇಕು. ಹಾಗೂ ಹಾಸ್ಟೆಲ್ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿ ನೇಮಕ ಮಾಡಲಾಗಿದ್ದು ಅಧಿಕಾರಿ/ಸಿಬ್ಬಂದಿಗಳು ಈ ಬಗ್ಗೆ ಹೆಚ್ಚಿನ ಗಮನ ಮತ್ತು ಕಾಳಜಿ ವಹಿಸಿ ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿದರು.

ಕಸ ವಿಲೇವಾರಿ ಮಾಡಲು ನಗರದಲ್ಲಿ 70 ವಾಹನಗಳು ಇದ್ದು ಹೆಚ್ಚುವರಿಯಾಗಿ ಇನ್ನೂ 20 ವಾಹನಗಳು ಬರಲಿವೆ. ಹಾಸ್ಟೆಲ್‍ಗೂ ವಾಹನ ಬರುವ ವ್ಯವಸ್ಥೆ ಮಾಡಲಾಗುವುದು. ನಗರದ ಸುತ್ತಮುತ್ತ ನಿರಂತರ ಶುದ್ದ ಕುಡಿಯುವ ನೀರಿಗಾಗಿ ರೂ.95 ಕೋಟಿ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಯೋಜನೆ ಪೂರ್ಣಗೊಂಡ ನಂತರ ನೀರು ನಿರಂತರವಾಗಿ ಲಭಿಸಲಿದೆ. ಹಾಗೂ 24*7 ಯೋಜನೆ ಕೂಡ ಪ್ರಗತಿಯಲ್ಲಿದೆ. ಇನ್ನು ನಗರ ಕೇಂದ್ರ ಗ್ರಂಥಾಲಯ ಅತ್ಯುತ್ತಮವಾಗಿದೆ ಅದನ್ನು ವಿದ್ಯಾಥಿಗಳು ಬಳಕೆ ಮಾಡಿಕೊಳ್ಳಬೇಕು, ಜೊತೆಗೆ ಅಗತ್ಯ ಪುಸ್ತಕಗಳ ಪಟ್ಟಿ ಮಾಡಿ ಅಧಿಕಾರಿಗಳು ತರಿಸಿಕೊಳ್ಳುವಂತೆ ತಿಳಿಸಿದ ಅವರು ವಿದ್ಯಾರ್ಥಿಗಳು ತಮಗೆ ಯಾವುದೇ ರೀತಿಯ ತೊಂದರೆ ಇದ್ದಲ್ಲಿ ತಮ್ಮ ಗಮನಕ್ಕೆ ತರಬೇಕು. ತಾವು ಸಹಕರಿಸಲು ಸದಾ ಸಿದ್ದ ಎಂದು ತಿಳಿಸಿದರು.

ಮಹಾನಗರಪಾಲಿಕೆ ಸುನೀತಾ ಅಣ್ಣಪ್ಪ ಮಾತನಾಡಿ, ಕಟ್ಟಡ ಹೊಸದಾಗಿದ್ದಾಗ ಸುಂದರವಾಗಿರುತ್ತದೆ. ಅದರ ನಿರ್ವಹಣೆ ಕೇವಲ ಇಲಾಖೆ ಅಥವಾ ಪಾಲಿಕೆಗೆ ಸೇರಿಲ್ಲ. ಬದಲಾಗಿ ವಿದ್ಯಾರ್ಥಿಗಳು ಕೂಡ ತಮ್ಮ ಕೊಠಡಿ, ವಿದ್ಯಾರ್ಥಿನಿಲಯವನ್ನು ಸ್ವಚ್ಚವಾಗಿ, ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಮೂಲಕ ಮುಂದೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಹಾಗೂ ಕಸ ವಿಲೇವಾರಿಗಾಗಿ ಪಾಲಿಕೆ ವತಿಯಿಂದ ನೂತನ ಹಾಸ್ಟೆಲ್‍ಗೆ ವಾಹನವನ್ನು ಕಳುಹಿಸಿಕೊಡಲಾಗುವುದು. ಕಸವನ್ನು ಸಮರ್ಪಕವಾಗಿ ಹಾಕುವುದು ನಿಮ್ಮ ಜವಾಬ್ದಾರಿ ಎಂದು ನುಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕ ವಿದ್ಯಾರ್ಥಿ ನಿಲಯವು 1980 ರಿಂದ ಪ್ರಾರಂಭಗೊಂಡಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹೊಸ ಕಟ್ಟಡವು ರೂ.6.45 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಪ್ರಸ್ತುತ ಹಾಸ್ಟೆಲ್‍ನಲ್ಲಿ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉಚಿತ ಊಟ, ಉಪಹಾರ, ವಸತಿಯೊಂದಿಗೆ ಪ್ರತಿ ಮಾಹೆ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ಒದಗಿಸಲಾಗುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಲಾಖೆಯಿಂದ ಹಾಸಿಗೆ, ಹೊದಿಕೆ, ಪ್ರತಿ ಎರಡು ವರ್ಷಕ್ಕೊಮ್ಮೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತದೆ. ಬಿ.ಎಡ್ ವ್ಯಾಸಂಗ ಮಾಡಿರುವ ನಿಲಯ ಪಾಲಕರನ್ನು ಹಾಸ್ಟೆಲ್‍ಗೆ ನೇಮಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕ ವಾತಾವರಣ ನಿರ್ಮಿಸಲಾಗಿದೆ ಎಂದು ಸಹಾಯಕ ನಿರ್ದೇಶಕರಾದ ಮಲ್ಲೇಶಪ್ಪ ಡಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಡಿಎಸ್‍ಎಸ್ ಅಧ್ಯಕ್ಷ ಹಾಲೇಶಪ್ಪ, ಜಗದೀಶ್, ಅಣ್ಣಪ್ಪ, ಶಿವಾಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್, ಸಹಾಯಕ ನಿರ್ದೇಶಕ ಮಲ್ಲೇಶಪ್ಪ ಡಿ ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...