ಅನೇಕ ದಿನಗಳಿಂದ 10 ರೂ. ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ತೆಗೆದುಕೊಳ್ಳಲು ಅಂಗಡಿ ಮಾಲೀಕರು ತಿರಸ್ಕರಿಸುತ್ತಿದ್ದರು. ಆದರೆ, ಹುಬ್ಬಳ್ಳಿಯ ಹೋಟೆಲ್ ವರ್ತಕರು ಆ ಆತಂಕವನ್ನು ಈಗ ಇಲ್ಲವಾಗಿಸಿದ್ದಾರೆ. ಅದೇನು ಅಂದರೆ 10 ಹಾಗೂ 20 ರೂ. ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
10 ರೂ. ನಾಣ್ಯಗಳು ಬಿಡುಗಡೆಯಾದ ಹೊಸದರಲ್ಲಿ ಚಲಾವಣೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಹೋದಾಗ ಕೆಲವು ಅಂಗಡಿಯವರು ನಾಣ್ಯವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು. 10. ರೂಗಳ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿದ್ದರಿಂದ, ಗ್ರಾಹಕರಿಂದ ನಾಣ್ಯ ಸ್ವೀಕಾರ ಮಾಡಲು ನಿರಾಕರಿಸುತ್ತಿದ್ದರು.
ಈ ಗೊಂದಲ್ಲಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿತ್ತು. 10 ರೂ. ಮುಖಬೆಲೆಯ ನಾಣ್ಯಗಳು ಸಂಪೂರ್ಣ ಮಾನ್ಯವಾಗಿದೆ, ಅವು ನಕಲಿಯಲ್ಲ. 10 ರೂಪಾಯಿ ನಾಣ್ಯಗಳನ್ನು ಎಲ್ಲಾ ರೀತಿಯ ವಹಿವಾಟುಗಳಿಗೆ ಬಳಸಬಹುದು ಎಂದು ಕೇಂದ್ರ ಹಣಕಾಸು ಸಚಿವ ಪಂಕಜ್ ಚೌಧರಿ ಹೇಳಿಕೆ ನೀಡಿದ್ದರು.
10 ರೂಪಾಯಿ ನಾಣ್ಯಗಳ ಚಲಾವಣೆ ಮೇಲೆ ಇದ್ದ ಆತಂಕವನ್ನು ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳು ದೂರ ಮಾಡಿದ್ದಾರೆ. 10 ಮತ್ತು 20 ರೂಪಾಯಿಗಳ ನಾಣ್ಯವನ್ನು ಸ್ವೀಕರಿಸುತ್ತೇವೆ ಎಂದು ಹೋಟೆಲ್ ಮುಂದೆ ಫಲಕಗಳನ್ನು ಹಾಕಿದ್ದಾರೆ.
