ಆರೋಗ್ಯ ಕ್ಷೇತ್ರದ ಜಾಗತಿಕ ಕೇಂದ್ರವಾಗಿರುವ ಭಾರತವನ್ನು ಬಿಂಬಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರೋಗ್ಯ ಸೇವಾ ವೃತ್ತಿಪರರ ಆನ್‌ಲೈನ್ ಪೋರ್ಟಲ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.
ಮುಂದಿನ ಆಗಸ್ಟ್ 15ರಂದು ಈ ಪೋರ್ಟಲ್ ಅನಾವರಣಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ “ಹೀಲ್ ಬೈ ಇಂಡಿಯಾ’ ಯೋಜನೆಯ ಭಾಗವಾಗಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ)ವು ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ಪೋರ್ಟಲ್‌ನಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳನ್ನು ನೀಡುವುದು, ಬಿಡುವುದು ಆರೋಗ್ಯ ವೃತ್ತಿಪರರ ಸ್ವಇಚ್ಛೆಗೆ ಬಿಟ್ಟಿದ್ದು. ದತ್ತಾಂಶಗಳ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೂ.15ರ ವೇಳೆಗೆ ಪೋರ್ಟಲ್ ಸಿದ್ಧವಾಗಲಿದ್ದು, ಅಂದಿನಿಂದ ಆರೋಗ್ಯ ಸಿಬ್ಬಂದಿ ನೋಂದಣಿ ಆರಂಭಿಸಬಹುದು ಎಂದು ಮೂಲಗಳು ಹೇಳಿವೆ.
ವೈದ್ಯರು, ದಾದಿಯರು ಮತ್ತು ಫಾರ್ಮಾಸಿಸ್ಟ್‌ಗಳು ಸೇರಿದಂತೆ ಆರೋಗ್ಯಸೇವಾ ಸಿಬ್ಬಂದಿಗೆ ಸಂಬಂಧಿಸಿದ ಮಾಹಿತಿಯು ಈ ಪೋರ್ಟಲ್‌ನಲ್ಲಿ ಇರಲಿದ್ದು, ಅದರಲ್ಲಿ ಅವರು ಯಾವ ದೇಶದಲ್ಲಿ ಸೇವೆ ಸಲ್ಲಿಸಲು ಬಯಸುತ್ತಾರೆ ಎಂಬ ವಿವರವೂ ದಾಖಲಾಗಿರುತ್ತದೆ.
ಸಾಮಾನ್ಯ ಮಾಹಿತಿಯ ಜೊತೆಗೆ ಕೆಲಸ ಮಾಡಲು ಇಚ್ಛಿಸುವ ದೇಶ, ಗೊತ್ತಿರುವ ಭಾಷೆ, ವೀಸಾ, ಆಯಾ ದೇಶಕ್ಕೆ ಸಂಬಂಧಿಸಿದ ಅರ್ಹತಾ ಪರೀಕ್ಷೆಯ ವಿವರಗಳನ್ನೂ ನಮೂದಿಸಬಹುದಾಗಿದೆ.
ಆಧುನಿಕ ವೈದ್ಯಪದ್ಧತಿ ಮಾತ್ರವಲ್ಲದೇ ಸಾಂಪ್ರದಾಯಿಕ ವೈದ್ಯರೂ ಇದರಲ್ಲಿ ನೋಂದಣಿ ಮಾಡಬಹುದು.