Sunday, December 14, 2025
Sunday, December 14, 2025

ಬೆಳ್ಳೂರಿನಲ್ಲಿ ಜನರ ಸಮಸ್ಯೆಗಳಿಗೆ ಫಟಾಫಟ್ ಸ್ಪಂದಿಸಿದ ಜಿಲ್ಲಾಧಿಕಾರಿ ಸೆಲ್ವಮಣಿ

Date:

ರೈತರಿಗೆ ವಿವಿಧ ಸೌಲಭ್ಯವನ್ನು ಪಡೆಯಲು ಅನುಕೂಲ ಮಾಡಿಕೊಡುವ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಬಸ್ ವ್ಯವಸ್ಥೆ ಮತ್ತು ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿ ಬೆಳ್ಳೂರು ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬೆಳ್ಳೂರು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕುಂದು ಕೊರತೆಯ ಅರ್ಜಿ ಸ್ವೀಕರಿಸಿ ಮಾತನಾಡಿದರು.

ಗ್ರಾಮಸ್ಥರಾದ ದೇವೇಂದ್ರಪ್ಪ ಮಾತನಾಡಿ, ಭತ್ತ, ಜೋಳ, ಶುಂಠಿ, ಕಬ್ಬು ಬೆಳೆಗೆಳಿಗೆ ವೈಜ್ಞಾನಿಕ ಬೆಲೆ ನಿಗದಿ, ಆರ್‍ಟಿಸಿ ಯಲ್ಲಿ ಹೆಸರು ಮತ್ತು ಬೆಳೆ ನಮೂದು, ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿ ಯಲ್ಲಿ ಭತ್ತ ರಾಗಿ ಗೋಧಿ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಸುವಂತೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಬೋರ್ಡೊ ಔಷಧಿಗೆ ಕಳೆದ ಬಾರಿ ಸಬ್ಸಿಡಿ ದೊರೆತಿಲ್ಲ, 2019 ರ ಆಗಸ್ಟ್ ನಲ್ಲಾದ ಪ್ರವಾಹದಲ್ಲಿ ಹಾನಿಗೊಳಗಾದವರಿಗೆ ಈವರೆಗೆ ಪರಿಹಾರ ದೊರೆತಿಲ್ಲ ಹಾಗೂ ಭತ್ತದ ನಾಟಿಯಲ್ಲಿ ಯಾಂತ್ರೀಕರಣದ ಸಹಾಯ, ಬಗರ್‍ಹುಕುಂ ಬೆಳೆಗಾರರಿಗೂ ಅಧಿಕೃತ ಬೆಳೆ ಮಾರಾಟ ವ್ಯವಸ್ಥೆ ದೊರಕಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ದರ ಸ್ಪರ್ಧೆ ಮತ್ತು ಮಧ್ಯವರ್ತಿಗಳನ್ನು ತಡೆಗಟ್ಟಲು ಸಹಕಾರಿ ಕ್ಷೇತ್ರದ ಬಳಕೆ ಮಾಡಿಕೊಳ್ಳಬೇಕು. ನೀವು ಸಹಕಾರ ಸೊಸೈಟಿ ರಚಿಸಿದಲ್ಲಿ ನಾವು ಮೂಲಭೂತ ಸೌಕರ್ಯ ನೀಡುತ್ತೇವೆ. ಇನ್ನು ರೈತರು ಯಂತ್ರೋಪಕರಣ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಗ್ರಾ.ಪಂ ಮಟ್ಟದಲ್ಲೇ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ದಿನ ನಿಗದಿಪಡಿಸಿಕೊಂಡು ಎಲ್ಲ ರೈತರೂ ನೊಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.

ಗ್ರಾಮಸ್ಥರಾದ ಯೋಗೇಶ್ ಮಾತನಾಡಿ, ಬೆಳ್ಳೂರಿಗೆ ನ್ಯಾಯಬೆಲೆ ಅಂಗಡಿ ಮಂಜೂರು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ಕ್ರಮ, ಕಾಲುಸಂಕ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳು ನ್ಯಾಯಬೆಲೆ ಅಂಗಡಿ ತೆರೆಯಲು ಅಧಿಸೂಚನೆ ಹೊರಡಿಸುವಂತೆ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿ, ಬೆಂಬಲ ಬೆಲೆಯಡಿ ಬೆಳೆ ಖರೀದಿಸಲು ರೈತರು ನೋಂದಣಿ ಮಾಡಿಕೊಳ್ಳುವ ಮೂಲಕ ಸಹಕರಿಸಬೇಕೆಂದರು.

ರಾಜಕುಮಾರ್ ಮಾತನಾಡಿ, ಶಾಲಾ-ಕಾಲೇಜು ಮಕ್ಕಳು ವಿದ್ಯಾಸಂಸ್ಥೆಗಳಿಗೆ ಹೋಗಿಬರಲು ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಈ ಹಿಂದೆ ಖಾಸಗಿ ಬಸ್ ಮಾರ್ಗ ಇದ್ದು, ಅವರು ನಡೆಸದಿದ್ದರೆ ಕೆಎಸ್‍ಆರ್‍ಟಿಸಿ ಬಸ್‍ಗೆ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.

ನಾಗಪ್ಪ ಅರ್ಜಿ ನೀಡಿ, ಊರಿನಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕೆಂದು ವಿನಂತಿಸಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸಣ್ಣ ಅಂಗಡಿಗಳಲ್ಲಿ ಮದ್ಯ ಮಾರಾಟ ಮತ್ತು ಸಾರ್ವಜನಿಕವಾಗಿ ಮದ್ಯ ಸೇವನೆ ಗಂಭೀರ ವಿಚಾರವಾಗಿದ್ದು ಅಬಕಾರಿ ಇಲಾಖೆಯವರು ದಿಢೀರ್ ದಾಳಿ ಮತ್ತು ಪ್ರಕರಣ ದಾಖಲು ಮಾಡುವ ಮೂಲಕ, ಹಾಗೂ ಗ್ರಾ,ಪಂ ಯವರು ಅಂಗಡಿ ಪರವಾನಗಿ ರದ್ದುಪಡಿಸುವುದು, ಪರವಾನಗಿ ಇಲ್ಲದಿದ್ದರೆ ಕೆಇಬಿ ಎನ್‍ಓಸಿ ರದ್ದುಪಡಿಸುವ ಮೂಲಕ ಕಡಿವಾಣ ಹಾಕಬೇಕೆಂದು ಸೂಚನೆ ನೀಡಿದರು.
ಇನ್ನೋರ್ವ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕೆರೆ ಒತ್ತುವರಿಯಾಗಿದೆ. ಹಲವು ಬಾರಿ ಅರ್ಜಿ ನೀಡಿದ್ದು ಈ ಬಾರಿ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು, ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಇನ್ನು 10 ದಿನದಲ್ಲಿ ತೆರವುಗೊಳಿಸುವಂತೆ ಸೂಚಿಸಿದರು.

ಗ್ರಾಮಗಳಲ್ಲಿ ಮೊಬೈಲ್ ನೆಟ್‍ವರ್ಕ್ ಇಲ್ಲದೇ ಎಲ್ಲ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ನೆಟ್‍ವರ್ಕ್ ಒದಗಿಸಿಕೊಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಡಿಸಿ, ಬಿಎಸ್‍ಎನ್‍ಎಲ್ ವತಿಯಿಂದ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ನಡೆಯುತ್ತಿದ್ದು 150 ಹಳ್ಳಿಗಳು ಬಾಕಿ ಇದೆ, ಶೀಘ್ರವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸ್ಮಶಾನ ಜಾಗಕ್ಕೆ ಬಂದ ಮನವಿಗೆ ಡಿಸಿ, ಸರ್ಕಾರಿ ಜಾಗ ಗುರುತಿಸಿ ತಿಳಿಸಿದಲ್ಲಿ, ಇಂದು ಸಂಜೆಯೊಳಗೆ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡುತ್ತೇನೆಂದು ಹೇಳಿದರು.

ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು, ಸಾಮಾಜಿಕ ಭದ್ರತೆ, ಕಂದಾಯ ಅರಣ್ಯ, ಸೇರಿದಂತೆ ಹಲವಾರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಾತನಾಡಿ, ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ-ಕಂದಾಯ ಇಲಾಖೆ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಜಿಲ್ಲಾಧಿಕಾರಿಗಳ ತಂಡ ಗ್ರಾಮ ಭೇಟಿ ನೀಡಿ ಅಲ್ಲಿಯೇ ಒಂದು ದಿನ ವಾಸ್ತವ್ಯ ಮಾಡುತ್ತಿರುವುದರಿಂದ ಹಳ್ಳಿಗಳಲ್ಲಿನ ವಸ್ತುಸ್ಥಿತಿ ಬಗ್ಗೆ ಅರಿವು ಉಂಟಾಗುತ್ತಿದೆ. ಜನರು ತಮ್ಮ ಸೌಲಭ್ಯಗಳಿಗೆ, ಸಮಸ್ಯೆ ಪರಿಹಾರಕ್ಕಾಗಿ ಓಡಾಡುವುದನ್ನು ತಪ್ಪಿಸಿ, ಶೀಘ್ರವಾಗಿ ಅವರಿಗೆ ಸೌಲಭ್ಯ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಶಿಕ್ಷಣ, ಅರಣ್ಯ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸ್ಥಳದಲ್ಲಿಯೇ ಹಾಜರಿದ್ದು ಸಮಸ್ಯೆ ಪರಿಹಾರಕ್ಕೆ ಹಾಗೂ ಸೌಲಭ್ಯ ಶೀಘ್ರವಾಗಿ ನೀಡಲು ಸಹಕರಿಸುತ್ತಾರೆ. ಈ ಭಾಗದಲ್ಲಿನ ಅರಣ್ಯ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಪ್ರಾದೇಶಿಕ ಸಮಸ್ಯೆ ಅರಿತು ಪರಿಹರಿಸಲು ಇದೊಂದು ಉತ್ತಮ ಅವಕಾಶವಾಗಿದ್ದು ಅಗತ್ಯವಿರುವವರೆಲ್ಲ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ತಹಶೀಲ್ದಾರ್ ಗ್ರೇಡ್-2 ರಾಕೇಶ್ ಫ್ರಾನ್ಸಿಸ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ರಾಜೀವ್ ಸ್ವಾಗತಿಸಿದರು, ಎಸಿ ನಾಗರಾಜ್, ಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ಭವಾನಿ, ಸದಸ್ಯರಾದ ತಿಮ್ಮಣ್ಣ ಬೆಳ್ಳೂರು, ಹೇಮಾವತಿ, ಪಲ್ಲವಿ, ಕವಿತ ತಾ,ಪಂ ಇಓ ಪ್ರವೀಣ್‍ಕುಮಾರ್, ಅರಣ್ಯ ಇಲಾಖೆ ಎಸಿಎಫ್, ಡಿಸಿಎಫ್, ಆರ್‍ಎಫ್‍ಓ, ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಹೊಸನಗರ ಶಾಸಕರಾದ ಹರತಾಳು ಹಾಲಪ್ಪನವರು ಬೆಳ್ಳೂರು ಗ್ರಾಮಕ್ಕೆ ಆಗಮಿಸಿ, ಜಿಲ್ಲಾಧಿಕಾರಿಗಳೊಂದಿಗೆ ಶಾಲೆಗಳಿಗೆ ಭೇಟಿ ನೀಡಿದರು.

ಜಿಲ್ಲಾಧಿಕಾರಿಗಳು ಬೆಳ್ಳೂರಿನ ಅಂಗನವಾಡಿ, ಸ.ಕಿ.ಪ್ರಾ.ಶಾಲೆ, ಸ.ಹಿ.ಪ್ರಾ.ಶಾಲೆಗಳಿಗೆ ಭೇಟಿ ನೀಡಿ , ವಿದ್ಯಾರ್ಥಿಗಳೊಂದಿಗೆ ಸಂವಾದಿಸಿ, ಪರಿಶೀಲಿಸಿದರು. ನಂತರ ಗುಳಿ ಗುಳಿ ಶಂಕರ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿ ಕುರಿತು ಗ್ರಾ.ಪಂಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ದೂಬೈಲು ಮತ್ತು ಮಸ್ತಾನಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...