ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುಂಡ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನೂತನ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ನೂತನ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸರಕಾರವನ್ನು ಇಂಪೋರ್ಟೆಡ್ ಸರಕಾರ ಎಂದು ಜರಿಯುತ್ತಿರುವ ಇಮ್ರಾನ್ ಖಾನ್, ತನ್ನ ಸೋಲಿಗೆ ಅಮೆರಿಕದ ಕೈವಾಡವೇ ಕಾರಣ ಎಂದು ಆರೋಪಿಸಿದ್ದಾರೆ.
ಗುಪ್ತಚರ ಸಂಸ್ಥೆಗಳ ಮಾಹಿತಿಯ ಪ್ರಕಾರ, ಪಿಟಿಐ ಕಾರ್ಯಕರ್ತರು ಕಾನೂನು ಜಾರಿ ಸಂಸ್ಥೆಗಳಿಂದ ಯಾವುದೇ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಮುಖಾಮುಖಿ ಆಗುವ ಸಾಧ್ಯತೆ ಇದೆ ಎಂಬುದು ಸರ್ಕಾರಿ ಸಂಸ್ಥೆಗಳಿಗೆ ಚೆನ್ನಾಗಿ ತಿಳಿದಿದೆ. ಅದನ್ನು ತಪ್ಪಿಸಲು ಕಷ್ಟವಾಗಲಿದೆ ಎಂಬ ವಿಚಾರವನ್ನು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿರುವ ಇಮ್ರಾನ್ ಖಾನ್, ಲಾಂಗ್ ಮಾರ್ಚ್ ಪ್ರಾರಂಭ ಮಾಡಿದ್ದಾರೆ. ಈ ರಾಲಿಯಲ್ಲಿ ಭಾಗವಹಿಸಲು ಪೇಶಾವರದಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿರುವ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಪಕ್ಷದ ಇತರ ಪ್ರಮುಖ ನಾಯಕರನ್ನು ಬಂಧಿಸಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ.
ಮೂಲಗಳ ಪ್ರಕಾರ, ಲಾಂಗ್ ಮಾರ್ಚ್‌ನಲ್ಲಿ ಅವರನ್ನು ಬಂಧಿಸುವುದು ಅಸಾಧ್ಯವಾದ ಕೆಲಸವೆಂದು ತೋರುತ್ತಿರುವಾಗ ಸಂಭವನೀಯ ಹಿಂಸಾಚಾರವನ್ನು ತಡೆಯಲು ಅವರನ್ನು ಬಂಧಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.