ಉಕ್ರೇನ್ ಹಾಗೂ ರಷ್ಯಾ ಯುದ್ಧ ಆರಂಭಗೊಂಡು ಸುಮಾರು ಮೂರು ತಿಂಗಳೇ ಕಳೆದಿದೆ. ಯುದ್ಧದಿಂದ ಉಕ್ರೇನ್ ಗೆ ಸುಮಾರು 100 ಬಿಲಿಯನ್ ಡಾಲರ್ ನಷ್ಟು ನಷ್ಟ ಸಂಭವಿಸಿದೆ. ಇದಕ್ಕೆ ರಷ್ಯಾ ಪರಿಹಾರ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರು ತಿಳಿಸಿದ್ದಾರೆ.
ಹೀಗೆ ಮಾಡುವುದು ನ್ಯಾಯೋಚಿತವಾಗಿದೆ. ನಮ್ಮ ದೇಶದ ಮೇಲೆ ಸುರಿದ ಪ್ರತೀ ಬಾಂಬ್ ನ, ನಮ್ಮತ್ತ ಉಡಾಯಿಸಿದ ಪ್ರತಿಯೊಂದು ಕ್ಷಿಪಣಿಯ ಭಾರವನ್ನೂ ಅವರು ಅನುಭವಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ನಾವು ಪಾಲುದಾರ ದೇಶವನ್ನು ಆಹ್ವಾನಿಸುತ್ತೇವೆ. ಮತ್ತು ರಷ್ಯಾದ ಕ್ರಮದಿಂದ ತೊಂದರೆ ಅನುಭವಿಸಿದ ಎಲ್ಲರೂ ತಮಗಾದ ಎಲ್ಲಾ ನಷ್ಟಗಳಿಗೂ ಪರಿಹಾರ ಪಡೆಯುವುದನ್ನು ಖಚಿತಪಡಿಸುವ ಕಾರ್ಯವಿಧಾನವನ್ನು ರಚಿಸಲಿದ್ದೇವೆ ಎಂದು ಅವರು ದೇಶವನ್ನುದ್ದೇಶಿಸಿ ನೀಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಶನಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ. ಅಝೊವ್‌ಸ್ತಲ್ ಉಕ್ಕು ಸ್ಥಾವರವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದಿರುವುದಾಗಿ ರಷ್ಯಾ ಪ್ರತಿಪಾದನೆ. ಇದರೊಂದಿಗೆ ಉಕ್ರೇನ್ ನ ಅತ್ಯಂತ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ನಲ್ಲಿ ಉಕ್ರೇನ್ ಯೋಧರ ಅಂತಿಮ ಪ್ರತಿರೋಧವನ್ನು ಹತ್ತಿಕ್ಕಿದ್ದು ಸ್ಥಾವರದಲ್ಲಿದ್ದ 2,439 ಉಕ್ರೇನ್ ಯೋಧರು ಶರಣಾಗಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.
ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್‌ಗೆ ಈ ವರ್ಷ ಸುಮಾರು 20 ಬಿಲಿಯನ್ ಡಾಲರ್ನಷ್ಟು ನೆರವು ಒದಗಿಸುವುದಾಗಿ ಜಿ7 ದೇಶಗಳ ಘೋಷಣೆ. ಉಕ್ರೇನ್‌ನ ಪೂರ್ವದ ಲುಹಾಂನ್ಸ್ಕ್ ಪ್ರಾಂತದಲ್ಲಿ ರಷ್ಯಾ ಸೇನೆ ಭಾರೀ ಆಕ್ರಮಣ ಮುಂದುವರಿಸಿದೆ. ಸಿವಿಯೆರೊಡೊನೆಟ್ಸ್ಕ್ ನಗರದಲ್ಲಿ ಬಾಂಬ್ ದಾಳಿಯಿಂದ ತೀವ್ರ ಹಾನಿಯಾಗಿದೆ. ಜನವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ.ಇದರಿಂದ ಅನೇಕ ಜನ ಸಾವನ್ನಪ್ಪಿದ್ದಾರೆ ಎಂದು ಲುಹಾನ್ಸ್ಕ್ ಗವರ್ನರ್ ಸೆರ್ಹಿಯ್ ಗೈದಾಯಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿಯಲ್ಲಿ ತಿಳಿಸಿದೆ.
ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಬಾಂಬ್ ದಾಳಿಯಿಂದಾಗಿ ಅಲ್ಲಿಂದ ಅಗತ್ಯದ ಆಹಾರ ವಸ್ತುಗಳ ರಫ್ತಿಗೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ದರ ಗಗನಕ್ಕೇರಿದ್ದು ಬಡಜನರಿಗೆ ತೀವ್ರ ಸಮಸ್ಯೆಯಾಗಿದೆ . ರಷ್ಯಾವು ತನ್ನ ಅನಾಗರಿಕ ಯುದ್ಧವನ್ನು ಕೊನೆಗೊಳಿಸಿ ಉಕ್ರೇನ್‌ನ ರೈತರು ತಮ್ಮ ಕಾಯಕ ಮುಂದುವರಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ಬ್ರಿಟನ್ ಆಗ್ರಹಿಸಿದೆ.
ಉಕ್ರೇನ್‌ಗೆ ಅಮೆರಿಕದ 40 ಬಿಲಿಯನ್ ಡಾಲರ್ ನೆರವಿನ ಮಸೂದೆಗೆ ಅಲ್ಲಿನ ಸಂಸತ್ತು ಅನುಮೋದನೆ ನೀಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್‌ನ ಝಿಟೊಮಿರ್ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕ್ಯಾಲಿಬ್ರ್ ಕ್ರೂಸ್ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಲಾಗಿದೆ. ಇವು ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳಿಂದ ಲಭಿಸಿದ ಶಸ್ತ್ರಾಸ್ತ್ರಗಳಾಗಿತ್ತು ಎಂದು ರಶ್ಯದ ರಕ್ಷಣಾ ಇಲಾಖೆ ನಿನ್ನೆ ಶನಿವಾರ ತಿಳಿಸಿದೆ.
ಅಮೆರಿಕ ಮತ್ತು ಯುರೋಪ್ ದೇಶಗಳು ಪೂರೈಸಿದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಉಪಕರಣಗಳನ್ನು ನಾಶಗೊಳಿಸಲಾಗಿದೆ. ಸಂಘರ್ಷ ತೀವ್ರಗೊಂಡಿರುವ ಪೂರ್ವದ ಡೊನ್ಬಾಸ್ ವಲಯದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್ ಯೋಜಿಸಿತ್ತು.