(2021-22ನೇ) ಸಾಲಿನ ಬೆಳೆ ವಿಮೆ ಹಣ ಇನ್ನೊಂದು ವಾರದಲ್ಲಿ ರೈತರ ಕೈ ಸೇರಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಹರಿಹರ ತಾಲೂಕಿನ ನಂದಿತಾವರೆ ಬಳಿಯ ಭಾಸ್ಕರರಾವ್ ಕ್ಯಾಂಪಿನಲ್ಲಿ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರೈತರು ವಿವಿಧ ಬೆಳೆ ಬೆಳೆಯುವ ಮೂಲಕ ಸಮತೋಲನ ಕಾಪಾಡಬೇಕು. ಯಾವುದಾದರೊಂದು ಬೆಳೆಯ ಬೆಲೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ಆದ್ದರಿಂದ ರೈತರು ಮಿಶ್ರಬೆಳೆ, ಬಹು ಬೆಳೆ ಬೆಳೆಯುವತ್ತ ಗಮನಹರಿಸಬೇಕು ಎಂದರು.
ಈಗಾಗಲೇ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪ್ರಸಕ್ತ ವರ್ಷ ಈಗಷ್ಟೇ ಮುಂಗಾರು ಪ್ರಾರಂಭವಾಗಿದೆ.
ಕೆಲ ವ್ಯಾಪಾರಸ್ಥರು ದುರುದ್ದೇಶದಿಂದ ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿ ರಸಗೊಬ್ಬರ ಮತ್ತು ಬೀಜದ ಕೊರತೆಯಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ರೈತರು ಇದನ್ನು ನಂಬಬಾರದು. ರಸಗೊಬ್ಬರ ಮತ್ತು ಬೀಜಕ್ಕೆ ಯಾವುದೇ ರೀತಿಯ ಕೊರತೆಯಿಲ್ಲ.
ಕೃತಕ ಗೊಬ್ಬರದ ಅಭಾವ ಉಂಟಾಗುವಂತೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ, ಕೃಷಿ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಬಾರಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರ ನೀಡಲಾಗಿದೆ.
ಪ್ರಸ್ತುತ ವರ್ಷವೂ ಅಷ್ಟೇ ಪ್ರಮಾಣದಲ್ಲಿ ಪರಿಹಾರ ನೀಡಲಾಗುವುದು. ಭತ್ತದ ಬೆಳೆಗೆ ವಿಮಾ ಪರಿಹಾರ ವಿಷಯದಲ್ಲಿ ರೈತರು ಆತಂಕ ಪಡುವುದು ಬೇಡ. ಬಿರುಗಾಳಿಗೆ ಭತ್ತ ನೆಲಕ್ಕೆ ಬಿದ್ದಿರುವುದರಿಂದ ಅದು ಪ್ರಕೃತಿ ವಿಕೋಪ ಪರಿಹಾರದಡಿ ಬರುತ್ತದೆ. ಹಾಗಾಗಿ ಭತ್ತದ ಬೆಳೆಗೂ ಪರಿಹಾರ ಸಿಗಲಿದೆ.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಅಂದಾಜು ಮಾಡುವುದು ಹಾಗೂ ಅವರಿಗೆ ಸೂಕ್ತ ಬೆಳೆ ಹಾನಿ ಪರಿಹಾರ ನೀಡುವುದರ ಕಡೆಗೆ ಗಮನ ಹರಿಸಬೇಕು ಎಂದರು.