ಉಕ್ರೇನಿನ ಪ್ರಮುಖ ಬಂದರು ನಗರ ಮರಿಯುಪೋಲ್ನಲ್ಲಿನ ಅಝೋವ್ಸ್ತಲ್ ಉಕ್ಕುಸ್ಥಾವರದೊಳಗೆ ಸೇರಿಕೊಂಡು ರಷ್ಯಾ ಸೇನೆಯ ವಿರುದ್ಧ ಹೋರಾಡುತ್ತಿರುವ ಯೋಧರು ಹೋರಾಟ ನಿಲ್ಲಿಸುವಂತೆ ಉಕ್ರೇನ್ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ.
ಉಕ್ಕು ಸ್ಥಾವರದಲ್ಲಿ ಇರುವ ಯೋಧರ ಪ್ರಾಣ ರಕ್ಷಿಸುವ ಉದ್ದೇಶದಿಂದ ಸೇನೆ ಈ ಆದೇಶ ನೀಡಿದೆ.
ಸ್ಥಾವರದೊಳಗೆ ಗಾಯಗೊಂಡಿರುವ ಹಾಗೂ ಮೃತಪಟ್ಟಿರುವ ಯೋಧರನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸುವ ಪ್ರಕ್ರಿಯೆಗೆ ಅವಕಾಶ ನೀಡುವ ಉದ್ದೇಶವಿದೆ ಎಂದು ಸ್ಥಾವರದೊಳಗಿಂದ ಯುದ್ಧ ಮುಂದುವರಿಸಿದ್ದ ಉಕ್ರೇನ್ ಸೇನಾ ತುಕಡಿಯ ಕಮಾಂಡರ್ ಡೆನಿಸ್ ಪ್ರೊಕೊಪೆಂಕೊ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
3 ವಿಷಯಗಳಿಗೆ ಆದ್ಯತೆ ನೀಡುವಂತೆ ನಮಗೆ ಸೂಚಿಸಲಾಗಿತ್ತು. ನಾಗರಿಕರು, ಗಾಯಗೊಂಡವರು ಮತ್ತು ಮೃತಪಟ್ಟವರು. ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈಗ ಗಾಯಾಳುಗಳು ಮತ್ತು ಮೃತರ ಬಗ್ಗೆ ಗಮನ ಹರಿಸಬೇಕಾಗಿದೆ. ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡಿದ ಹೀರೋಗಳ ಅಂತ್ಯಸಂಸ್ಕಾರವನ್ನು ಅವರ ಕುಟುಂಬದವರು ಗೌರವಪೂರ್ವಕವಾಗಿ ನಡೆಸುವರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ತಾನು ಸೆರೆಹಿಡಿದ ರಷ್ಯಾದ ಯೋಧರನ್ನು ರಷ್ಯಾ ಸೆರೆಹಿಡಿದ ತನ್ನ ಯೋಧರ ಜೊತೆ ವಿನಿಮಯ ಮಾಡಿಕೊಳ್ಳುವ ಬಗ್ಗೆ ಮಾತುಕತೆ ಮುಂದುವರಿದಿದೆ ಎಂದು ಉಕ್ರೇನ್ ಹೇಳಿದೆ.