ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ತವರು ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಹೋರಾಟ ಆರಂಭವಾಗಲಿದೆ.
ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಗೃಹ ಸಚಿವರ ತವರೂರು ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಶಿವಮೊಗ್ಗ ತನಕ ಪಾದಯಾತ್ರೆ ನಡೆಸಲಿದ್ದಾರೆ.
ಮೇ 6 ರಿಂದ 10ರ ತನಕ ನಾಲ್ಕು ದಿನಗಳ ಕಾಲ ಈ ಬೃಹತ್ ಪಾದಯಾತ್ರೆ ನಡೆಯಲಿದೆ. ಈ ಮೂಲಕ ಗೃಹ ಸಚಿವರ ವಿರುದ್ಧ ತವರು ಕ್ಷೇತ್ರದಲ್ಲಿಯೇ ದೊಡ್ಡ ಹೋರಾಟವನ್ನು ಪ್ರತಿಪಕ್ಷ ಕಾಂಗ್ರೆಸ್ ಹಮ್ಮಿಕೊಂಡಿದೆ.
ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಮೇ 6ರಂದು ಆರಂಭವಾಗುವ ಮೌನ ಪ್ರತಿಭಟನೆ ಹೊದಲ ಮಾರ್ಗವಾಗಿ ಬೆಜ್ಜವಳ್ಳಿ, ಮಂಡಗದ್ದೆ, ಸಕ್ರೆಬೈಲು, ಹರಕೆರೆ ಮೂಲಕ ಮೇ 10ರಂದು ಜಿಲ್ಲಾ ಕೇಂದ್ರ ಶಿವಮೊಗ್ಗ ತಲುಪಲಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಈ ಕುರಿತು ಮಾತನಾಡಿದ್ದು, “ಬಿಜೆಪಿ ಸರ್ಕಾರದ ಎಲ್ಲಾ ಅಕ್ರಮಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಮೇ 6 ರಿಂದ 10ರ ತನಕ ಬೃಹತ್ ಪಾದಯಾತ್ರೆ ಚಳವಳಿ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.